ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ನೆಲದಲ್ಲಿ ಬಸವಾದಿ ಶರಣರಿಂದ ಆರಂಭವಾದ ಸಾಮಾಜಿಕ ನ್ಯಾಯದ ಚಳವಳಿಯನ್ನು ಬಳಿಕ ಸರ್ವಜ್ಞ, ಸೂಫಿ ಸಂತರು, ನಾರಾಯಣ ಗುರು, ಕನಕದಾಸರು ಸೇರಿದಂತೆ ಹಲವಾರು ಸಮಾಜ ಸುಧಾರಕರು ಮುಂದುವರಿಸಿಕೊಂಡು ಬಂದಿದ್ದಾರೆ. ಬಾಬಾ ಸಾಹೇಬರು ಈ ಆಶಯಗಳಿಗೆ ಸಾಂವಿಧಾನಿಕ ರಕ್ಷಣೆ ನೀಡಿ, ಕಾನೂನಿನ ಬಲ ತುಂಬಿದ್ದಾರೆ. ಆದರೂ ಇಂದಿಗೂ ಅಸಮಾನತೆ, ಶೋಷಣೆಗಳು ಜೀವಂತವಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಾತಿ, ಧರ್ಮ, ಲಿಂಗ, ಭಾಷೆ, ಬಣ್ಣ ಈ ಯಾವುದರ ಮೇಲೂ ತಾರತಮ್ಯ ಮಾಡದೆ, ಪ್ರತಿ ವ್ಯಕ್ತಿಗೂ ಸಮಾನ ಅವಕಾಶ, ಹಕ್ಕುಗಳನ್ನು ನೀಡುವುದೇ ಸಾಮಾಜಿಕ ನ್ಯಾಯ. ಇದಕ್ಕಾಗಿಯೇ ನನ್ನ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ಮುಡಿಪಿಟ್ಟಿದ್ದೇನೆ, ನನ್ನ ಕೊನೆಯ ಉಸಿರಿರುವವರೆಗೂ ಅವಕಾಶ ವಂಚಿತ ಜನರ ಪರವಾಗಿಯೇ ನಿಲ್ಲುತ್ತೇನೆ.
ವಿಶ್ವ ಸಾಮಾಜಿಕ ನ್ಯಾಯದ ದಿನವಾದ ಇಂದು ಸಾಮಾಜಿಕ ನ್ಯಾಯದ ಬಂಡಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಸಂಕಲ್ಪಗೈಯ್ಯೋಣ. ಸಮಸಮಾಜಕ್ಕಾಗಿ ಜೊತೆಗೂಡಿ ಶ್ರಮಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

