ಸಮಾಜ ತಿದ್ದುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು-ಆನಂದ ಮೂರ್ತಿ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಮಾಜ ತಿದ್ದುವಲ್ಲಿ ಶಿಕ್ಷಕರ ಪಾತ್ರ ಹಿರಿದಾದದ್ದು. ಶಿಕ್ಷಕರು ಸಮಾಜದ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಸಮಯ ಪಾಲನೆ ವರ್ತನೆಗಳು ಸರಿಯಾಗಿರಬೇಕು ಎಂದು ಕೊಂಗಾಡಿಯಪ್ಪ ಪದವಿ ಪೂರ್ವ  ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎನ್ ಆನಂದಮೂರ್ತಿ ಹೇಳಿದರು.

  ನಗರದ ಜಿ.ಕೆ. ಪ್ರೌಢಶಾಲೆಯಲ್ಲಿ ನಡೆದ ಕೊಂಗಾಡಿಯಪ್ಪನವರ ಉಪನ್ಯಾಸ ಮಾಲಿಕೆ ಸಮಾರೋಪ ಸಮಾರಂಭದಲ್ಲಿ “ನಮ್ಮ ಊರಿನ ಪುಣ್ಯ ಪುರುಷ ಲೋಕ ಸೇವಾ ನಿರತ ಡಿ.ಕೊಂಗಾಡಿಯಪ್ಪ ” ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು ಕೊಂಗಾಡಿಯಪ್ಪನವರಿಗೆ ಕಡುಬಡತನ ಇದ್ದರೂ ಸ್ವ ಇಚ್ಛೆಯಿಂದ ವಿದ್ಯಾಭ್ಯಾಸ ಮುಂದುವರಿಸಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಶಿಕ್ಷಣವೇ ಶಕ್ತಿ ಶಿಕ್ಷಣದಿಂದ ಮಾತ್ರ ಜನತೆಯ ಉದ್ದಾರ ಸಾಧ್ಯ ಎಂದು ಬಲವಾಗಿ ನಂಬಿದ್ದರು. ಅಕ್ಷರ ಕ್ರಾಂತಿಯಿಂದ ಊರಿನ ಜನತೆಯ ಮನ ಗೆದ್ದರು. ಶಿಕ್ಷಣ ಕಲಿತರೆ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಬಲವಾಗಿ ನಂಬಿದ್ದರು ಹಾಗೂ ಊರಿನ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದರು. ಜಾತಿಭೇದ ಲಿಂಗ ತಾರತಮ್ಯ ಬಡವ ಶ್ರೀಮಂತರೆನ್ನದೆ ಎಲ್ಲರಿಗೂ ಸಮಾನತೆಯನ್ನು ನೀಡಿದ್ದರು. ಪರೋಪಕಾರ ಹಾಗೂ ಹೃದಯ ಶ್ರೀಮಂತಿಕೆಯಿಂದ ಜನಮನ ಗೆದ್ದರು. ಲೋಯರ್ ಸೆಕೆಂಡರಿ ಪರೀಕ್ಷೆಗೆ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಊಟ ವಸತಿ ವ್ಯವಸ್ಥೆಗಳನ್ನು ಮಾಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ದೊಡ್ಡಬಳ್ಳಾಪುರದ ಜೀವನಾಡಿ ನೇಕಾರಿಕೆ ಉದ್ಯಮವನ್ನು ಬಲಪಡಿಸುವ ಉದ್ದೇಶದಿಂದ ಕೈಗಾರಿಕಾ ತರಬೇತಿ ಶಾಲೆಯನ್ನು ತೆರೆದರು. ಕೊಂಗಾಡಿಯಪ್ಪನವರಿಗೆ ಪುಸ್ತಕ ಪ್ರೇಮ ಹೆಚ್ಚಾಗಿತ್ತು. ಪುಸ್ತಕಗಳನ್ನು ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಹೆಚ್ಚಿಸುಕೊಳ್ಳುವುದಲ್ಲದೆ ಮನೆಯಲ್ಲಿಯೇ ಪುಸ್ತಕ ಭಂಡಾರವನ್ನು ಸ್ಥಾಪಿಸಿ ಇತರರನ್ನು ಓದಲು ಪ್ರೇರೇಪಿಸುತ್ತಿದ್ದರು. ಸಾಮಾಜಿಕ ಪ್ರಜ್ಞೆ ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಅವರಲ್ಲಿತ್ತು. ಅವರು ಪರಿಸರ ಪ್ರೇಮಿ ಆಗಿದ್ದರು. ನಗರ ಹಾಗೂ ಹೊರವಲಯದಲ್ಲಿರುವ ರಸ್ತೆಗಳಲ್ಲಿ ಗಿಡಮರಗಳನ್ನು ನೆಟ್ಟರು. ನಗರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು ಎಂದರು.

- Advertisement - 

 ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ಪ್ರೌಢಶಾಲೆ ಅರಳು ಮಲ್ಲಿಗೆ ಬಾಗಿಲು ಹಿರಿಯ ಶಿಕ್ಷಕ ಎಚ್. ಎನ್. ಪ್ರಕಾಶ್ ಕೊಂಗಾಡಿಯಪ್ಪನವರು ದೊಡ್ಡಬಳ್ಳಾಪುರ ನಗರಕ್ಕೆ ವಿದ್ಯುತ್, ನಲ್ಲಿ ನೀರು ಪ್ರೌಢಶಾಲೆ ಮುಂತಾದ ಸೌಲಭ್ಯಗಳನ್ನು ತಂದುಕೊಟ್ಟ ಮಹಾತ್ಮ. ಗಾಂಧೀಜಿಯವರಿಗಿಂತಲೂ ಮೊದಲೇ ಸಮಾನತೆ ಸರಳ ಜೀವನ  ರೂಢಿಸಿಕೊಂಡಿದ್ದರು. ಅಧಿಕಾರಿಗಳಿಗೆ ಪತ್ರ ಬರೆದು ನಗರಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ನಿವೇದಿಸಿಕೊಳ್ಳುತ್ತಿದ್ದರು. ಅವರ ಕಾರ್ಯ ಶ್ಲಾಘನೀಯ ಎಂದರು.

ಕೊಂಗಾಡಿಯಪ್ಪ ಪುಸ್ತಕದ ಲೇಖಕ ಡಾ.ಎ. ಓ. ಅವಲಮೂರ್ತಿ ಮಾತನಾಡಿ ಕೊಂಗಾಡಿಯಪ್ಪನವರ ಕಿರುಹೊತ್ತಿಗೆ ಮುದ್ರಿಸಿ ಇದೇ ತಿಂಗಳ 22ರಂದು ಸರ್ ಸಿ.ವಿ. ರಾಮನ್ ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಬರುವ ಎಲ್ಲ ವಿದ್ಯಾರ್ಥಿಗಳಿಗೆ ಕಿರು ಹೊತ್ತಿಗೆಯನ್ನು ಉಚಿತವಾಗಿ ನೀಡಲಾಗುವುದು ಎಂದರು.

- Advertisement - 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಜಿ. ಕೆ. ಪ್ರೌಢಶಾಲೆಯ ಕಾರ್ಯದರ್ಶಿ ಕೆ.ಜಿ.ದಿನೇಶ್ ಮಾತನಾಡಿ ಕೊಂಗಾಡಿಯಪ್ಪ ಅಕ್ಷರ ದಾಸೋಹ, ಅನ್ನದಾಸೋಹ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದ್ದರು ಅವರ ಸೇವೆ ಎಲ್ಲರಿಗೂ ಮಾದರಿ ಎಂದರು.

 ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ ಆಂಜನೇಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎ ಜಯರಾಮ್, ಮುಖ್ಯ ಶಿಕ್ಷಕ ಪ್ರಸನ್ನ, ಮುಖಂಡರಾದ ರಾಜೇಶ್ ಕುಮಾರ್, ಶಿಕ್ಷಕಿ ಚಂದ್ರಕಲಾ, ಸರಸ್ವತಿ ಮೊದಲದವರು ಕಾರ್ಯಕ್ರಮ ದಲ್ಲಿ ಹಾಜರಿದ್ದರು.

 

Share This Article
error: Content is protected !!
";