ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಎಐ ಶೃಂಗ ಸಭೆಯಂತಹ ದೊಡ್ಡ, ಜಾಗತಿಕ ವೇದಿಕೆಯಲ್ಲಿ, ಪ್ರತಿಭಟನೆ ಸೋಗಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹತಾಶೆ, ಅಸಹನೆಯನ್ನು, ಕೆಟ್ಟ ರೀತಿಯಲ್ಲಿ ಬೀದಿಗೆ ತಂದಿದೆ. ಅಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಜಾಗತಿಕವಾಗಿ ದೇಶದ ಹಿರಿಮೆಗೆ ಮಸಿ ಬಳಿಯುವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ಮಾಡಿದರು.
ವಿದೇಶಿ ಗಣ್ಯರ ಮುಂದೆ ಅಸಭ್ಯ ಪ್ರದರ್ಶನದ ಮೂಲಕ ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ. ‘ವಿನಾಶಕಾಲೇ ವಿಪರೀತ ಬುದ್ಧಿ‘ ಎನ್ನುವಂತೆ, ಎಲ್ಲ ಕಡೆ ಕುಸಿಯುತ್ತಿರುವ ತನ್ನ ನೆಲೆಯಿಂದ ತಲೆ ಕೆಟ್ಟು, “ದೇಶಕ್ಕಿಂತ ಸ್ವಾರ್ಥವೇ ಲೇಸು” ಎನ್ನುವ ದುಸ್ಥಿತಿ ಕಾಂಗ್ರೆಸ್ಸಿಗೆ ಬಂದಿದೆ. ದೇಶದ ಜನತೆ ಕಾಂಗ್ರೆಸ್ ಪಕ್ಷದ ಈ ಅಸಹ್ಯ ವರ್ತನೆಯನ್ನು ಎಂದಿಗೂ ಕ್ಷಮಿಸರು ಎಂದು ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಅಧಿಕಾರ ಲಾಲಸೆ, ಅಸಹನೆಗಳಿಂದ ದೇಶದ ಘನತೆಗೆ ಮಸಿ ಬಳಿಯುವ ಕಾಂಗ್ರೆಸ್ಸಿನ ಇಂತಹ ಅಸಭ್ಯ ಕುತಂತ್ರಗಳಿಗೆ ಧಿಕ್ಕಾರ. ಇಡೀ ದೇಶ ಕಾಂಗ್ರೆಸ್ ವರ್ತನೆಯನ್ನು ಖಂಡಿಸುತ್ತಿದ್ದು, ರಾಷ್ಟ್ರವಿರೋಧಿ ಕಾಂಗ್ರೆಸ್‌ಪಕ್ಷದ ವಿರುದ್ಧ ಬೆಂಗಳೂರಿನಲ್ಲಿ ನಮ್ಮ ಯುವ ಮೋರ್ಚಾ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್‌ಮುನಿರಾಜು, ಶಾಸಕರು, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಯುವ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

