ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಮಾಡಿದ ಆರೋಪದ ಮೇಲೆ 25 ಎಬಿವಿಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಾಗಿರುವ ಘಟನೆ ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಜರುಗಿದೆ.
ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಮುಂದೆ ಮಂಗಳವಾರ ಸಂಜೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಕಾಶ್ಮೀರದ ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವ ಚರ್ಚೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಸಂಘ, ಸ್ಪಾರ್ಕ್ ವಿದ್ಯಾರ್ಥಿ ವೃಂದದಿಂದ ಆಯೋಜಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿ ಕೂಡಲೇ ಯೂನಿವರ್ಸಿಟಿಯ ಮಾನ್ಯತೆ ರದ್ದುಗೊಳಿಸಲು ಕೋರಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದ್ದಾಗ ಯೂನಿವರ್ಸಿಟಿ ಒಳಗಡೆಯಿಂದ ವಿವಿ ಪರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪರಿಸ್ಥಿತಿ ಕೈ ಮೀರುತ್ತಿದ್ದುದನ್ನು ಗಮನಿಸಿ, ಯೂನಿವರ್ಸಿಟಿ ಒಳಗಡೆಗೆ ಎಬಿವಿಪಿ ಕಾರ್ಯಕರ್ತರು ನುಗ್ಗಿದ್ದಲ್ಲದೆ ಯೂನಿವರ್ಸಿಟಿ ನಾಮಫಲಕಕ್ಕೆ ಮಸಿ ಬಳಿದು ಹಿಂಸೆಯ ರೂಪ ಪಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿ ರಾತ್ರಿ ಗಲಾಟೆಗೆ ತೆರೆ ಎಳೆದಿರುವುದಾಗಿ ಸರ್ಜಾಪುರ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಸೆಕ್ಯೂರಿಟಿ ಹೆಡ್ ಎಸ್ ವಿಲ್ಸನ್ ನೀಡಿದ ದೂರಿನ ಮೇರೆಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, 25 ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಯೂನಿವರ್ಸಿಟಿಗೆ ಒತ್ತಾಯಪೂರ್ವಕ ಪ್ರವೇಶ ಹಾಗೂ ಸೆಕ್ಯೂರಿಟಿಗಳಾದ ಜಗದೀಶ್, ಚಂದನ್ ಮಹಾಲಿಕ್, ಚಟ್ಟಾರ್ ಬಹುದ್ದೂರ್, ನರೇಶ್, ಶ್ರೀಪತಿ ಮತ್ತು ಹರೀಶ್ ಮೇಲೆ ದೊಣ್ಣೆಗಳಿಂದ ಕೊಲೆ ಬೆದರಿಕೆ ಹಾಕಿರುವುದಲ್ಲದೆ ಮೊದಲ ಬಿಎ ವಿದ್ಯಾರ್ಥಿ ಮಹಮದ್ ಅಲಿ ಅಹಮದ್ ಮೇಲೆ ಹಲ್ಲೆ ಮಾಡಿದ ಆರೋಪ ಹೊರೆಸಿ ದೂರು ನೀಡಿದ್ದರು. 25 ಎಬಿವಿಪಿ ಕಾರ್ಯಕರ್ತರು ಆನೇಕಲ್ ನ್ಯಾಯಾಲಯದಲ್ಲಿ ಬೇಲ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

