ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾರ್ಮಿಕ ಸಚಿವ ಸಂತೋಷ್ ಲಾಡ್ರವರ ೫೨ ನೇ ಹುಟ್ಟುಹಬ್ಬದ ಅಂಗವಾಗಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ಫೆ.27 ರಂದು ರಾಜ್ಯಾದ್ಯಂತ ಆಪತ್ ರಕ್ಷಕ ದಿನಾಚರಣೆ ಆಚರಿಸಲಾಗುವುದು ಎಂದು ಟ್ರಸ್ಟ್ ರಾಜ್ಯಾಧ್ಯಕ್ಷ ಡಿ.ರಂಗಸ್ವಾಮಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರನ್ನು ಹಾಗೂ ತುರ್ತು ಪರಿಸ್ಥಿತಿಯಲ್ಲಿರುವವರನ್ನು ರಕ್ಷಣೆ ಮಾಡುವುದು ನಮ್ಮ ಉದ್ದೇಶ ಎಂದರು.
ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಆಪತ್ ರಕ್ಷಕ ದಿನಾಚರಣೆ ಹಮ್ಮಿಕೊಂಡಿದ್ದು, ವಿವಿಧ ರಂಗಗಳಲ್ಲಿ ಸಾಧನೆಗೈದಿರುವವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಕಾರ್ಮಿಕ ಸಚಿವ ಸಂತೋಷ್ಲಾಡ್ರವರು ಸಮಾಜದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಸಹಾಯಕ್ಕೆ ನಿಂತು ಆಪತ್ ರಕ್ಷಕರಾಗಿರುವುದರಿಂದ ಅವರ ಹುಟ್ಟುಹಬ್ಬವನ್ನು ಆಪತ್ ರಕ್ಷಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆಂದರು. ದೇವರಾಜ್, ಅಣ್ಣಪ್ಪ, ರಾಜಣ್ಣ, ರಘುನಾಥ್ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

