ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯವು ದೇಶದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಟಾಟಾ ಸಮೂಹವು ರಾಜ್ಯದ ಅಭಿವೃದ್ಧಿಯಲ್ಲಿ ಪ್ರಬಲ ಪಾಲುದಾರನಾಗಿ ಮುಂದುವರಿದಿದೆ. 2025ರ ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಒಟ್ಟು ರಾಜ್ಯ ಉತ್ಪನ್ನವು (GSDP) ಸುಮಾರು 360 ಬಿಲಿಯನ್ ಯುಎಸ್ ಡಾಲರ್ (ಅಂದಾಜು ರೂ. 30 ಲಕ್ಷ ಕೋಟಿ) ತಲುಪಿದ್ದು, ಭಾರತದ ಒಟ್ಟು ಜಿಡಿಪಿಗೆ ರಾಜ್ಯವು 8.7% ರಷ್ಟು ಕೊಡುಗೆ ನೀಡುತ್ತಿದೆ.
ಟಾಟಾ ಸಮೂಹದ ಪ್ರಸ್ತುತ ಕಾರ್ಯಕ್ಷಮತೆ: ರಾಜ್ಯದಲ್ಲಿ ಟಾಟಾ ಸಮೂಹವು ಈಗಾಗಲೇ 5 ಬಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 41,000 ಕೋಟಿ) ಹೂಡಿಕೆ ಮಾಡಿದ್ದು, ಒಟ್ಟು 1,36,600ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಸರೆಯಾಗಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ :
24 ಕಚೇರಿಗಳಲ್ಲಿ 83,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, 58 ದೇಶಗಳ ಗ್ರಾಹಕರಿಗೆ ಸೇವೆ ನೀಡುತ್ತಿದೆ. ವಿಶೇಷವೆಂದರೆ ಇಲ್ಲಿನ ಶೇಕಡ 99ರಷ್ಟು ವಿದ್ಯುತ್ ಬಳಕೆಯು ನವೀಕರಿಸಬಹುದಾದ ಇಂಧನ ಮೂಲಗಳಿಂದ ಲಭ್ಯವಾಗುತ್ತಿದೆ.
ಟಾಟಾ ಎಲೆಕ್ಟ್ರಾನಿಕ್ಸ್: ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಫೆಸಿಲಿಟಿಯಲ್ಲಿ 32,230 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ರಕ್ಷಣೆ ಮತ್ತು ವಿಮಾನಯಾನ: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (TASL) ರಾಜ್ಯದಲ್ಲಿ 5 ಉತ್ಪಾದನಾ ಮತ್ತು ಸಂಶೋಧನಾ ಘಟಕಗಳನ್ನು ಹೊಂದಿದ್ದು, ಡ್ರೋನ್, ಸ್ಯಾಟಲೈಟ್ ಬಿಡಿಭಾಗಗಳು ಮತ್ತು ರಕ್ಷಣಾ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ.
ಇತರ ವಲಯಗಳು : ಟಾಟಾ ಮೋಟಾರ್ಸ್, ಟಾಟಾ ಪವರ್ (614 ಮೆಗಾವ್ಯಾಟ್ ಯೋಜನೆ), ಟಾಟಾ ಕಾಫಿ (19 ಎಸ್ಟೇಟ್‍ಗಳು) ಮತ್ತು ಐಹೆಚ್‍ಸಿಎಲ್ (13 ಹೋಟೆಲ್‍ಗಳು) ರಾಜ್ಯದಲ್ಲಿ ಪ್ರಬಲ ಅಸ್ತಿತ್ವ ಹೊಂದಿವೆ.
ಭವಿಷ್ಯದ ಹೂಡಿಕೆ ಮತ್ತು ಯೋಜನೆಗಳು : ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಲು ಟಾಟಾ ಸಮೂಹವು ಮುಂದಿನ ದಿನಗಳಲ್ಲಿ 2.9 ಬಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 24,000 ಕೋಟಿ) ಹೂಡಿಕೆಯನ್ನು ಘೋಷಿಸಿದೆ.
ವೈಟ್‍ಫೀಲ್ಡ್‍ನಲ್ಲಿ ಹೊಸ ಟಿಸಿಎಸ್ ಕ್ಯಾಂಪಸ್ : 25,000 ಆಸನ ಸಾಮಥ್ರ್ಯದ ಬೃಹತ್ ಕ್ಯಾಂಪಸ್ ನಿರ್ಮಾಣವಾಗಲಿದೆ.
ವಿಮಾನಯಾನ ಹಬ್ :
ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಹಯೋಗದಲ್ಲಿ ದಕ್ಷಿಣ ಭಾರತದ ಮೊದಲ ನಾಗರಿಕ ಮತ್ತು ರಕ್ಷಣಾ ವಿಮಾನಯಾನ ಹಾಗೂ ಎಂಆರ್‍ಒ ಹಬ್ ಸ್ಥಾಪನೆಯಾಗಲಿದೆ.
ನವೀಕರಿಸಬಹುದಾದ ಇಂಧನ : ಮುಂದಿನ 5 ವರ್ಷಗಳಲ್ಲಿ 2,500 ಮೆಗಾವ್ಯಾಟ್ ಹೆಚ್ಚುವರಿ ಸೌರ ಮತ್ತು ಇಂಧನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಗೆ ಟಾಟಾ ಸಮೂಹದ ಈ ಹೂಡಿಕೆಗಳು ಹೊಸ ವೇಗ ನೀಡಲಿವೆ ಎಂದು ಪ್ರಕಟಣೆ ತಿಳಿಸಿದೆ.

