ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಮಟ್ಟದಲ್ಲಿ ರಾಜ್ಯವನ್ನು ಎಐ ಡೇಟಾ ಹಬ್ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಬೆಂಗಳೂರಿನ ಖನಿಜ ಭವನದಲ್ಲಿ ESDM ವಿಷನ್ ಗ್ರೂಪ್ ಸಭೆ ನಡೆಸಲಾಯಿತು. ರಾಜ್ಯವನ್ನು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ & ಮ್ಯಾನ್ಯುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಮಾತ್ರ ಸೀಮಿತವಾಗದೇ, ಜಾಗತಿಕ ಹಬ್ ಆಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವೇಗ ನೀಡಲಾಯಿತು ಎಂದು ಪಾಟೀಲ್ ತಿಳಿಸಿದರು.
ಸಭೆಯಲ್ಲಿ ಇಎಸ್ ಡಿಎಂ ವಲಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ ನಡೆಸಿ, ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಮುಖ್ಯಾಂಶಗಳು:
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗವನ್ನು 500 ಮೆಗಾವ್ಯಾಟ್ ಸಾಮರ್ಥ್ಯದ ಎಐ ಡೇಟಾ ಹಬ್ ಆಗಿ ಅಭಿವೃದ್ಧಿಪಡಿಸುವ ಸ್ಪಷ್ಟ ಗುರಿ.
500 ಮೆಗಾವ್ಯಾಟ್ ಮತ್ತು ಅದಕ್ಕಿಂತ ಹೆಚ್ಚಿನ ಹೈಪರ್ಸ್ಕೇಲ್ ಡೇಟಾ ಸೆಂಟರ್ಗಳಿಗೆ ಪೂರಕ ವಾತಾವರಣ ನಿರ್ಮಾಣ.
25 ರಿಂದ 200 ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ಗಳನ್ನು ಟಿಯರ್-2 ಮತ್ತು ಟಿಯರ್-3 ನಗರಗಳಿಗೆ ವಿಸ್ತರಿಸುವ ಯೋಜನೆ.
ಮಂಗಳೂರಿನಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸ್ಥಾಪನೆಗೆ ಕಾರ್ಯಸಾಧ್ಯತಾ ಅಧ್ಯಯನ. ₹25,000–30,000 ಕೋಟಿ ಮೌಲ್ಯದ ಎರಡನೇ ಹಂತದ ಜಾಗತಿಕ ಹೂಡಿಕೆಯನ್ನು ಕರ್ನಾಟಕಕ್ಕೆ ಸೆಳೆಯುವ ದೃಢ ನಿಲುವು.
ಅಸೆಂಬ್ಲಿ–ಟೆಸ್ಟಿಂಗ್–ಪ್ಯಾಕೇಜಿಂಗ್, ವಿಶೇಷ ಉಗ್ರಾಣ ವ್ಯವಸ್ಥೆ ಸೇರಿದಂತೆ ಸರಬರಾಜು ಸರಪಳಿಯ ಕೊರತೆಗಳನ್ನು ನಿವಾರಿಸಿ, ತಂತ್ರಜ್ಞಾನ ವರ್ಗಾವಣೆ ಹಾಗೂ IP ಬೆಂಬಲವನ್ನು ಬಲಪಡಿಸುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಸಭೆಯಲ್ಲಿ Infineon, Hitachi Energy, Tata Semiconductors ಮುಂತಾದ ಜಾಗತಿಕ ಕಂಪನಿಗಳ ಪ್ರತಿನಿಧಿಗಳ ಉಪಸ್ಥಿತಿ – ಕರ್ನಾಟಕದ ಮೇಲಿನ ವಿಶ್ವಾಸಕ್ಕೆ ಸ್ಪಷ್ಟ ಸಾಕ್ಷಿ.
ಅಮೆರಿಕಾ ಮತ್ತು ಮಲೇಶ್ಯಾಕ್ಕೆ ಉನ್ನತ ಮಟ್ಟದ ನಿಯೋಗ ಕಳುಹಿಸುವ ಚರ್ಚೆ; ಟಿಯರ್-3/4 ನಗರಗಳಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರಗಳ ಸ್ಥಾಪನೆ; ಜಾಗತಿಕ ವಿಶ್ವವಿದ್ಯಾಲಯಗಳ ಸಹಭಾಗಿತ್ವ – ಪ್ರತಿಭೆ ಮತ್ತು ತಂತ್ರಜ್ಞಾನ ಎರಡನ್ನೂ ಬೆಳೆಸುವ ದಿಟ್ಟ ಹೆಜ್ಜೆ ಇಡಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

