ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕಮಗಳೂರಿನಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಬಂಧುಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆಯನ್ನು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಅನ್ನ ನೀಡುವ ಕೈಗಳಿಗೆ ಬೇಡಿ ತೊಡಿಸಿ, ರಕ್ತ ಹರಿಸುವ ಮೂಲಕ ಈ ಸರ್ಕಾರ ತನ್ನ ಅಹಂಕಾರದ ಪರಮಾವಧಿ ಪ್ರದರ್ಶಿಸಿದೆ.
ರಾಜ್ಯಾದ್ಯಂತ ಪ್ರತಿನಿತ್ಯ ಕಾಡಾನೆಗಳ ದಾಳಿಯಿಂದ ದಿನಗೂಲಿ ಕಾರ್ಮಿಕರು ಮತ್ತು ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಅವರ ಕಣ್ಣೀರು ಒರೆಸುವ ಬದಲು ಅವರ ಮೇಲೆಯೇ ಕೇಸ್ ದಾಖಲಿಸಿ ಜೈಲಿಗೆ ಅಟ್ಟಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
ಅಮಾಯಕ ರೈತರ ಮೇಲೆ ಲಾಠಿ ಪ್ರಹಾರ ಮಾಡಿ, ಅವರನ್ನು ಬಂಧಿಸಿ ಪ್ರತಿಭಟನೆಯನ್ನು ಹತ್ತಿಕ್ಕಿದೆವು ಎಂದು ಅಹಂಕಾರದಿಂದ ಬೀಗುತ್ತಿರುವ ಅಧಿಕಾರಿಗಳೇ, ನಿಮ್ಮ ಮುಖದ ಮೇಲಿರುವ ಆ ವಿಕೃತ ನಗು ಶಾಶ್ವತವಲ್ಲ. ತಾವು ಪ್ರತಿನಿತ್ಯ ತಿನ್ನುವ ಅನ್ನ ಇದೇ ರೈತರು ಬೆಳೆದಿದ್ದು ಎಂಬ ಸತ್ಯವನ್ನು ಮರೆಯಬೇಡಿ ಎಂದು ರವಿ ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಕುರ್ಚಿ ಜಗಳ ಬದಿಗಿರಿಸಿ ಮೊದಲು ರೈತರ ನೋವಿಗೆ ಸ್ಪಂದಿಸಿ. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ. ನೆನಪಿರಲಿ, ನೀವು ಮತ್ತು ನಿಮ್ಮ ಅಧಿಕಾರಿಗಳು ತಿನ್ನುವ ಪ್ರತಿ ತುತ್ತು ಅನ್ನವೂ ಇದೇ ರೈತರ ಬೆವರಿನ ಫಲ. ಜನರ ತಾಳ್ಮೆ ಪರೀಕ್ಷಿಸಬೇಡಿ, ಅನ್ನದಾತನ ಶಾಪ ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕ ರವಿ ಎಚ್ಚರಿಸಿದ್ದಾರೆ.

