ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ–ಚಿತ್ರದುರ್ಗ-ತುಮಕೂರು ಹೊಸ ರೈಲು ಮಾರ್ಗ ಯೋಜನೆಯ ಹಿನ್ನೆಲೆ ಮೋಟಾರ್ ಟ್ರ್ಯಾಲಿ ಮೂಲಕ ಮಾರ್ಗ ಪರಿಶೀಲನೆ ನಡೆಸಿದ ನಂತರ ಆನಗೋಡು ಗ್ರಾಮದಲ್ಲಿ ಆಯೋಜಿಸಲಾದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಪತ್ರ ನೀಡಿ ಸಂಸದೆ ಒತ್ತಾಯಿಸಿದರು.

ರೈಲ್ವೆ ಸಂಬಂಧಿತ ಪ್ರಮುಖ ಮನವಿಗಳು:
1.ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯ ಬಾಲಭವನದಲ್ಲಿ ಮಕ್ಕಳಿಗಾಗಿ ಟಾಯ್ ಟ್ರೇನ್ ಸೇವೆ ಆರಂಭಿಸಬೇಕು.
- ದಾವಣಗೆರೆ–ಹರಿಹರ–ಬಳ್ಳಾರಿ ಮಾರ್ಗದಲ್ಲಿ ಸಂಚರಿಸುವ DEMU ರೈಲು ಸಂಖ್ಯೆ 07395/07396ರಲ್ಲಿ ಮಹಿಳಾ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಒದಗಿಸಬೇಕು.
3.ಹರಿಹರ–ಚಿತ್ರದುರ್ಗ ಪ್ರಯಾಣಿಕರ ರೈಲನ್ನು ಮರುಪ್ರಾರಂಭಿಸಬೇಕು. ರೈಲು ಸಂಖ್ಯೆ 12725-26 ಮತ್ತು 17325-26ಗಳಿಗೆ ಮಾಯಕೊಂಡ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು.
4.ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ನಿರೀಕ್ಷಣಾ ಸ್ಥಳಕ್ಕೆ ಮೇಲ್ಛಾವಣಿ, ಕುರ್ಚಿಗಳು, ಶೌಚಾಲಯ ವ್ಯವಸ್ಥೆ ಹಾಗೂ ವೇದಿಕೆ ಸಂಖ್ಯೆ 02 ವಿಸ್ತರಣೆ ಕೈಗೊಳ್ಳಬೇಕು.
5.ಹುಬ್ಬಳ್ಳಿ–ವಿಜಯವಾಡ ರೈಲನ್ನು ಯಶವಂತಪುರ ಜಂಕ್ಷನ್ ವರೆಗೆ ವಿಸ್ತರಿಸಬೇಕು.
ರೈಲ್ವೆಗಾಗಿ ಭೂಸ್ವಾಧೀನಗೊಂಡ ಹಿನ್ನೆಲೆ ಮನವಿದಾರರ ಸಂಬಂಧಿ ಶ್ರೀಮತಿ ರೇಣುಕಾ ಅವರಿಗೆ ದಯಾಪಾಲನಾ ಆಧಾರದ ಮೇಲೆ ರೈಲ್ವೆಯಲ್ಲಿ ಉದ್ಯೋಗ ನೀಡಬೇಕು.
6.ಹರಿಹರ ರೈಲು ನಿಲ್ದಾಣದಲ್ಲಿ ಅಪಘಾತ ತಡೆಗೆ ಅಗತ್ಯ ಮುನ್ನೆಚ್ಚರಿಕಾ ನಾಗರಿಕ ಕಾಮಗಾರಿಗಳನ್ನು ಕೈಗೊಳ್ಳಬೇಕು.
7.ಕರ್ನಾಟಕದಿಂದ ಜಮ್ಮು–ಕಾಶ್ಮೀರದವರೆಗೆ (ಬೆಂಗಳೂರು–ಹುಬ್ಬಳ್ಳಿ–ಮಿರಾಜ್–ಅಮೃತಸರ–ವೈಷ್ಣೋ ದೇವಿ–ಕತ್ರಾ) ದೀರ್ಘದೂರ ರೈಲು ಸೇವೆ ಆರಂಭಿಸಬೇಕು.
8.ದಾವಣಗೆರೆ–ತುಮಕೂರು ರೈಲು ಹಳಿ ಕಾಮಗಾರಿಯನ್ನು ವೇಗಗೊಳಿಸಿ ಶೀಘ್ರ ಸಂಚಲನಕ್ಕೆ ತರಬೇಕು.
9.ಬೆಳಗಾವಿ–ಮೈಸೂರು ರೈಲು ಸಂಖ್ಯೆ 17302ರ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಸಂಸದೆ ಪ್ರಭಾ ಮನವಿ ಮಾಡಿದರು.
ಜಲಶಕ್ತಿ ಇಲಾಖೆ ಸಂಬಂಧಿತ ಪ್ರಮುಖ ಮನವಿ:
ಭದ್ರಾ ಅಣೆಕಟ್ಟು ದಾವಣಗೆರೆ ಹಾಗೂ ಮಲೇಬೆನ್ನೂರು ಭಾಗಗಳ ರೈತರಿಗೆ ನೀರಾವರಿ ಒದಗಿಸುವ ಪ್ರಮುಖ ಮೂಲವಾಗಿದೆ.
ದಾವಣಗೆರೆಯ ನಾಲ್ಕು ಹಾಗೂ ಮಲೇಬೆನ್ನೂರಿನ ಮೂರು ಉಪವಿಭಾಗಗಳು ಸೇರಿ ಒಟ್ಟು ಏಳು ಉಪವಿಭಾಗಗಳ ಕಾಲುವೆಗಳ ಮೂಲಕ 69,400 ಹೆಕ್ಟೇರ್ (1,71,490 ಎಕರೆ) ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಿದೆ.
ಆದರೆ ಕಾಲುವೆಗಳಲ್ಲಿ ಹೂಳು ಜಮಾವಣೆ, 60 ವರ್ಷ ಹಳೆಯ ಜೀರ್ಣಾವಸ್ಥೆಯಲ್ಲಿರುವ ನೀರು ನಿಯಂತ್ರಣ ನಾಗರಿಕ ಕಾಮಗಾರಿಗಳು, ಸಮರ್ಪಕ ನಿರ್ವಹಣೆಯ ಕೊರತೆ ಇವುಗಳಿಂದ ನೀರಿನ ಸಮರ್ಪಕ ಹಂಚಿಕೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಕೊನೆಯ ಭಾಗದ ಸುಮಾರು 5,700 ಹೆಕ್ಟೇರ್ (14,086 ಎಕರೆ) ಭೂಮಿಗೆ ನೀರು ತಲುಪುತ್ತಿಲ್ಲ.
ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ನೀರಿನ ತೀವ್ರ ಕೊರತೆಯಿಂದ ರೈತರು ವರ್ಷಕ್ಕೆ ಒಂದೇ ಬೆಳೆ ಬೆಳೆಯುವ ಪರಿಸ್ಥಿತಿ ಎದುರಿಸುತ್ತಿದ್ದು, ಗಂಭೀರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕಾಲುವೆಗಳಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಅನುದಾನ ನೀಡಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.

