ಚಂದ್ರವಳ್ಳಿ ನ್ಯೂಸ್,ದೊಡ್ಡಬಳ್ಳಾಪುರ:
ಲಾವಣ್ಯ ವಿದ್ಯಾಸಂಸ್ಥೆಯಿಂದ 2025-26ನೇ ಸಾಲಿನ ದ್ವಿತಿಯ ಪಿಯುಸಿ ಹಾಗು ಎಸ್ಎಸ್ ಎಲ್ ಸಿ ಪರೀಕ್ಷಾರ್ಥವಾಗಿ ಶಾರದಾ ಪೂಜೆ ಸರಸ್ವತಿ ಪೂಜೆ ಗೋಮಾತೆ ಪೂಜೆ ಮತ್ತು ಹಿರಿಯರ ಪಾದಪೂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗಣೇಶ ಹೋಮದೊಂದಿಗೆ ಸರಸ್ವತಿ ಪೂಜೆ ನೆರವೇರಿಸಿ ಆರಂಭವಾದ ಕಾರ್ಯಕ್ರಮದಲ್ಲಿ ಮೊದಲು ಗೋವಿಗೆ ಪೂಜೆ ಸಲ್ಲಿಸಲಾಯಿತು. ನಂತರ ಶಾಲಾ ಮಕ್ಕಳಿಂದ ತಮ್ಮ ಮನೆಯ ಹಿರಿಯರಿಗೆ ಪಾದ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷೆ ಯಶೋದಮ್ಮ ಹನುಮಂತೇಗೌಡ ಇಂದು ಹಿರಿಯರಿಗೆ ಗೌರವ ನೀಡುವ ಗುಣ ಕಡಿಮೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಯಾವುದೇ ಕಾರ್ಯಕ್ಕೆ ಹಿರಿಯರ ಆಶೀರ್ವಾದ ಪಡೆದರೆ ಯಶಸ್ಸು ಖಂಡಿತ ಸಿಗುತ್ತಿದೆ. ಅವರ ಆಶೀರ್ವಾದವೇ ನಮಗೆ ಶ್ರೀರಕ್ಷೆಯಾಗಲಿದೆ. ಹಿರಿಯರ ಜೀವನಾನುಭವ ಅವರ ಮಾರ್ಗದರ್ಶನ ಕಿರಿಯರಿಗೆ ಅವಶ್ಯವಿದೆ.
ಕಿರಿಯರು ಹಿರಿಯನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇದನ್ನು ಶಾಲಾ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲು ಹಿರಿಯರ ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗೋವು ಸಹ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಒಮ್ಮೆ ಗೋವಿನ ಪ್ರದಕ್ಷಿಣೆಯನ್ನು ಮಾಡಿದರೆ ಆರು ಬಾರಿ ಭೂ ಪ್ರದಕ್ಷಿಣೆಯನ್ನು 16 ಸಾವಿರ ಬಾರಿ ಕಾಶಿ ಯಾತ್ರೆಯನ್ನು ಮತ್ತು ನೂರು ಬಾರಿ ಪುಣ್ಯ ಸ್ನಾನವನ್ನು ಮಾಡಿದ ಪುಣ್ಯವು ದೊರಕುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮಕ್ಕಳು ಹಿರಿಯರ ಆಶೀರ್ವಾದ ಪಡೆದು ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಮಾತೃ ಭೋಜನದಲ್ಲಿ ಅಮ್ಮಂದಿರಿಂದ ಮಕ್ಕಳಿಗೆ ಕೈತುತ್ತು ತಿನಿಸಲಾಯಿತು. ಹಿರಿಯರ ಹಾಗೂ ಪೋಷಕರ ಕ್ರೀಡಾಕೂಟದಲ್ಲಿ ಶಾಲೆಯ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಲಾವಣ್ಯ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ವಿಶ್ವಾಸ್ ಹನುಮಂತೇಗೌಡ, ಸಂಸ್ಥೆಯ ನಿರ್ದೇಶಕರಾದ ಶೃತಿ ಮಂಜುನಾಥ್, ಜೀವಿತಾ ವಿಶ್ವಾಸ್, ಲಾವಣ್ಯ ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಮಂಜುನಾಥ್, ಬಿ.ಎಡ್ ಪ್ರಾಂಶುಪಾಲ ಪ್ರೊ. ಜಿ.ಕೃಷ್ಣಮೂರ್ತಿ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

