ವೈಭವದ ಕನಸವಾಡಿ ಶನಿ ಮಹಾತ್ಮ ಸ್ವಾಮಿಯ ಬ್ರಹ್ಮ ರಥೋತ್ಸವ ಸಂಪನ್ನ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನಸವಾಡಿಯಲ್ಲಿ ಶನಿ ಮಹಾತ್ಮ 71 ವರ್ಷದ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.

ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಹಣ್ಣು, ದವನ ಸಮರ್ಪಿಸಿ ಧನ್ಯತೆ ಮೆರೆದರು.

- Advertisement - 

 ರಥೋತ್ಸವದಲ್ಲಿ ವೀರಗಾಸೆ, ಚಂಡೆ ವಾದ್ಯ, ಗಾರುಡಿ ಬೊಂಬೆ, ಸೋಮನ ಕುಣಿತ, ಕೇರಳದ ಕಲಾವಿದರ ದೇವತಾ ಮೂರ್ತಿಗಳ ಪ್ರದರ್ಶನಗಳ ತಂಡ ಗಳೊಡನೆ ತಮಟೆ ವಾದನೆ, ಮಂಗಳವಾದ್ಯ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

ಬ್ರಹ್ಮ ರಥೋತ್ಸವದ ಅಂಗವಾಗಿ, ಶ್ರೀ ಶನಿ ಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ದೇವಾಲಯದಲ್ಲಿ ಮಹಾಗಣಪತಿ, ನವಗ್ರಹ, ಶ್ರೀ ಶನೇಶ್ವರ ಹೋಮ, ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಆಗಮಿಸಿದ್ದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

- Advertisement - 

ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಕೋಡಿಹಳ್ಳಿ, ಮಾರಸಂದ್ರ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಜನರು ಪಾನಕ, ಕೋಸಂಬರಿ, ಪ್ರಸಾದಗಳನ್ನು ಭಕ್ತಾದಿಗಳಿಗೆ ನೀಡುತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದೇವಾಲಯದಲ್ಲಿ ಪ್ರತಿನಿತ್ಯ ಸಂಜೆ ಸ್ವಾಮಿಯ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಮಾ.1 ರಂದು 101 ದೇವತೆಗಳ ಉತ್ಸವ ಹಾಗೂ ಮದ್ದಿನ ಮರ ಕಾರ್ಯಕ್ರಮಗಳಿವೆ. ಮಧ್ಯಾಹ್ನ 12 ಗಂಟೆಗೆ ಶನಿಮಹಾತ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಎಲ್ಲಾ ದೇವರುಗಳು ಮೆರವಣಿಗೆ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೇರಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಗೆ ಹೇಮಂತ್ ಮತ್ತು ಸಂಗಡಿಗರಿಂದ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ನಟ ಗಿಲ್ಲಿ ಸೇರಿದಂತೆ ನಟ ನಟಿಯರು ಭಾಗವಹಿಸಲಿದ್ದಾರೆ. ರಾತ್ರಿ 10 ಗಂಟೆಗೆ ಬಾಣ ಬಿರುಸು, ಆಕಾಶದಲ್ಲಿ ಸಿಡಿಯುವ ಸಿಡಿಮದ್ದು ಹಾಗೂ ಒಂದು ಗಂಟೆಗಳ ಕಾಲ ಮದ್ದಿನ ಮರ ಕಾರ್ಯಕ್ರಮವಿದೆ.

ಪ್ರತಿ ನಿತ್ಯ ರಾತ್ರಿ 8.30ಕ್ಕೆ ನಡೆಯುವ ನಾಟಕೋತ್ಸವದಲ್ಲಿ ಫೆ.27ರಂದು ಕರುನಾಡ ಕನ್ನಡಾಂಭೆ ಸಾಂಸ್ಕೃತಿಕ ವೇದಿಕೆ ವತಿಯಿಂದ ರಾಜಾ ವಿಕ್ರಮ‘, ಫೆ.28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ಶನಿ ಪ್ರಭಾವ‘, ಮಾ.1ರಂದು ವಿಜಯಕುಮಾರಿ ಮಹಿಳಾ ಕಲಾ ತಂಡದಿಂದ ಕುರುಕ್ಷೇತ್ರ‘, ಮಾ.2ರಂದು ಚೆನ್ನಕೇಶವ ಕೃಪಾಪೋಷಿತ ನಾಟಕ ಮಂಡಲಿಯಿಂದ ಸಂಪೂರ್ಣ ರಾಮಾಯಣ‘, ಮಾ.3ರಂದು ಶ್ರೀ ಗಜೇಂದ್ರ ಕೃಪಾಪೋಷಿತ ನಾಟಕ ಮಂಡಲಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಗಳು ನಡೆಯಲಿವೆ.ಎಂದು ದೇವಾಲಯದ ಅಡಳಿತ ಮಂಡಲಿ ತಿಳಿಸಿದೆ.

 

Share This Article
error: Content is protected !!
";