ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಗಳೇ ನಮಗೆ ದಾರಿದೀಪ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿರುವ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿ ಅವರು ಮಾತನಾಡಿದರು.
ಇದೇ ವೇಳೆ ಬಾಳೆಹೊನ್ನೂರು ಧರ್ಮಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದ ಅಂಗವಾಗಿ, ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಸ್ಥಳದಲ್ಲಿ ನಿರ್ಮಿಸಿರುವ 51 ಅಡಿ ಎತ್ತರದ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ರಂಭಾಪುರಿ ಪೀಠ ನಿರ್ಮಿಸಿರುವ ಮೇಲ್ಪಾರ್ ರಸ್ತೆಯ ಉದ್ಘಾಟನೆ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ಭಾಗವಹಿಸಿ ಮಾತನಾಡಿದರು.
ಇಂತಹ ಪುಣ್ಯಭೂಮಿಯಲ್ಲಿ ನಿಂತುಕೊಂಡು ಶ್ರೀ ರೇಣುಕಾಚಾರ್ಯರ ಮಂಗಲಮೂರ್ತಿ ಶಿಲಾನ್ಯಾಸ ಭೂಮಿ ಪೂಜೆಯಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಭಾಗ್ಯವಾಗಿದೆ. ಶ್ರೀ ಶ್ರೀ ಶ್ರೀ ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ನನ್ನ ಕೋಟಿ ಪ್ರಣಾಮಗಳು. ಅದೇ ರೀತಿ ನನ್ನ ಗುರುಗಳಾದ ವೀರ ಗಂಗಾಧರ ಅಜ್ಜಯ್ಯನ ಪಾದಗಳಿಗೂ ನನ್ನ ನಮಸ್ಕಾರಗಳು.
ಶ್ರೀ ವೀರ ಗಂಗಾಧರ ಅಜ್ಜಯ್ಯನವರು ಈ ಪೀಠದ ಅಧ್ಯಕ್ಷರಾಗಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಅವರು ಸಂದೇಶವನ್ನು ಕೊಟ್ಟಿದ್ದರು. ನಮ್ಮ ಮನೆಗಳನ್ನು ಯಾವ ರೀತಿ ಕಾಪಾಡುತ್ತೇವೆಯೋ ಹಾಗೆಯೇ ನಮ್ಮ ಮಠಗಳನ್ನು ನಾವು ಕಾಪಾಡಬೇಕು ಎಂದು ಡಿಸಿಎಂ ಶಿವಕುಮಾರ್ ಅಭಿಪ್ರಾಯಪಟ್ಟರು.

