ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಪುನರ್ ಪರಿಷ್ಕರಣೆ ಮಾಡುವಂತೆ ಮಾಗಡಿ ಶಾಸಕ ಹೆಚ್ಸಿ ಬಾಲಕೃಷ್ಣ ಆಗ್ರಹಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲೇ ಗ್ಯಾರಂಟಿಗಳಿಗೆ ಅಸಮಾಧಾನ ವ್ಯಕ್ತವಾಗಿದೆ.
ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿವೆ. ಉಳ್ಳವರಿಗೂ ಮತ್ತು ಆರ್ಥಿಕವಾಗಿ ಸದೃಢರಿಗೂ ಗ್ಯಾರಂಟಿ ಸೌಲಭ್ಯಗಳು ಲಭಿಸುತ್ತಿವೆ. ಇದರಿಂದ ಯೋಜನೆಗಳ ನಿಜವಾದ ಉದ್ದೇಶ ಈಡೇರುತ್ತಿಲ್ಲ ಮತ್ತು ಸರ್ಕಾರಕ್ಕೆ ಅನಗತ್ಯ ಹೊರೆ ಹೆಚ್ಚುತ್ತಿದೆ ಎಂದು ಬಾಲಕೃಷ್ಣ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬಡವರು ಮತ್ತು ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರೆಯಬೇಕು. ಇದಕ್ಕಾಗಿ ಸರ್ಕಾರ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿ, ಅರ್ಹರನ್ನು ಮಾತ್ರ ಗುರುತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಸಾರಿಗೆ ಬಸ್ಸಿನಲ್ಲಿ ಶ್ರೀಮಂತರು ಉಚಿತವಾಗಿ ಪ್ರಯಾಣಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ, ಯೋಜನೆಗಳನ್ನು ಸೂಕ್ತ ಮಾನದಂಡಗಳೊಂದಿಗೆ ಪರಿಷ್ಕರಿಸಿದರೆ, ಉಳಿತಾಯವಾಗುವ ಹಣವನ್ನು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಲ್ಲಿ ಶಾಸಕ ಬಾಲಕೃಷ್ಣ ಮನವಿ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ನಡೆಸದ ಸರ್ಕಾರದ ನಿಲುವಿನ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

