ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಣೇಹಳ್ಳಿಮಠವು ಸಾಹಿತ್ಯ, ಶಿಕ್ಷಣ ಮತ್ತು ರಂಗಭೂಮಿಯ ಮೂಲಕ ಶರಣ ಸಂಸ್ಕೃತಿಯನ್ನು ಪಸರಿಸುತ್ತಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು ನಿವಾಸದಲ್ಲಿ ನಟರಾಜು ರವರು ಬರೆದಿರುವ ಯಶಸ್ಸಿನ ದಾರಿ ನಿಮ್ಮದಾಗಲಿ, ಪ್ರಶ್ನಿಸದೆ ನಂಬದಿರಿ, ಅರಿವೇ ಗುರು, ಸತ್ಯ ಮಿಥ್ಯ, ಆರೋಗ್ಯವೇ ಆನಂದ ಪುಸ್ತಕಗಳನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು ಶಿವಸಂಚಾರ ಎಂಬ ರಂಗತಂಡದ ಮೂಲಕ ಪ್ರತಿ ವರ್ಷ ನಾಟಕೋತ್ಸವ ಸಾಣೇಹಳ್ಳಿ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತದೆ. ರಾಷ್ಟ್ರೀಯ ನಾಟಕೋತ್ಸವ ಈಗಾಗಲೇ 2025 ನವೆಂಬರ್ ತಿಂಗಳಲ್ಲಿ ಯಶಸ್ವಿಯಾಗಿ ಜರುಗಿತು. ಈ ಬಾರಿಯ ಶಿವ ಸಂಚಾರದಲ್ಲಿ ‘ಜಂಗಮದೆಡೆಗೆ‘, ‘ಶಿವಯೋಗಿ ಸಿದ್ಧರಾಮೇಶ್ವರ‘, ‘ಕಳ್ಳರ ಸಂತೆ ‘ಎಂಬ ನಾಟಕಗಳನ್ನು ಪ್ರದರ್ಶಿಸಲಾಯಿತು. ಪ್ರಸ್ತುತ ಶಿವಸಂಚಾರ ನಾಟಕ ತಂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಂಗಪ್ರದರ್ಶನ ಮಾಡುತ್ತಿದೆ ಎಂದರು.
ಸಾಣೇನಹಳ್ಳಿ ಮಠದಲ್ಲಿ ಪ್ರತಿವರ್ಷ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಯದಲ್ಲಿ ನಾಟಕ ಪ್ರದರ್ಶನಗಳ ಜೊತೆಗೆ ವಿಚಾರ ಸಂಕಿರಣಗಳು, ವಚನಗೀತೆಗಳು, ನೃತ್ಯ ರೂಪಕಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಏಪ್ರಿಲ್ ತಿಂಗಳಲ್ಲಿ ಮಕ್ಕಳಿಗಾಗಿ ವಿಶೇಷ ಬೇಸಿಗೆ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು ಮಾತನಾಡಿ, ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ವೈಚಾರಿಕತೆ, ಸಾಮಾಜಿಕ ಸುಧಾರಣೆ ಮತ್ತು ಶರಣ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಸವಣ್ಣನವರ ತತ್ವಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಜ್ಞಾನಗಂಗಾ ಪ್ರೌಢಶಾಲೆಯ ಶಿಕ್ಷಕ ಕೋದಂಡರಾಮ್, ಮುತ್ತಣ್ಣ ಮತ್ತು ಡಾ.ಹುಲಿಕಲ್ ನಟರಾಜ್ ಅವರ ಕುಟುಂಬ ವರ್ಗದವರು ಹಾಜರಿದ್ದರು.

