ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಲವೇ ಎಲ್ಲದಕ್ಕೂ ವಾಮಮಾರ್ಗ ಎಂದುಕೊಂಡಿರುವ ಈ ಶತಮಾನದ ನಕಲಿ ಅರ್ಥ ಶಾಸ್ತ್ರಜ್ಞ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಸಾಲ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
2025–26ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲದ ಮೊತ್ತ 8.14 ಲಕ್ಷ ಕೋಟಿಯಷ್ಟಾಗಲಿದೆ ಮತ್ತು ಇದು ರಾಜ್ಯದ ಜಿಎಸ್ಡಿಪಿಯ ಶೇ26.5ರಷ್ಟಾಗಲಿದೆ ಎಂದು ಭಾರತೀಯ ರಿಸರ್ವ್ಬ್ಯಾಂಕ್(ಆರ್ಬಿಐ) ಅಂದಾಜಿಸಿದ್ದು ಇದರಿಂದ 7 ಕೋಟಿ ಕನ್ನಡಿಗರ ತಲಾ ಸಾಲ 1,16,258 ರೂಪಾಯಿಗಳಿಗೆ ಏರಲಿದೆ.
ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಾಲರಾಮಯ್ಯನವರು ಜಾರಿಗೆ ತಂದಿರುವ ಅವೈಜ್ಞಾನಿಕ ಗ್ಯಾರಂಟಿಗಳು, ಮಾಡಿರುವ ಸಾಲು ಸಾಲು ಹಗರಣಗಳು ಕನ್ನಡಿಗರ ಮೇಲೆ ಲಕ್ಷಾಂತರ ಕೋಟಿ ಸಾಲದ ಹೊರೆ ಹೊರಿಸಿ ಕರ್ನಾಟಕದ ಆರ್ಥಿಕ ಶಿಸ್ತನ್ನು ಹಳಿ ತಪ್ಪಿಸಿದೆ ಎಂದು ಅವರು ದೂರಿದ್ದಾರೆ.
ಸಾಲದ ಸುಳಿಗೆ ಕರುನಾಡು ಸಿಲುಕಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಬಿದ್ದಿದೆ. ಆರ್ಥಿಕತೆ ಹಳ್ಳ ಹಿಡಿದಿದೆ ಎಂದು ಅವರು ದೂರಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ತಮ್ಮ ಕೃಪೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಈಗಾಗಲೇ ಪಾತಾಳಕ್ಕೆ ಕುಸಿದಿರುವಾಗ, ಯಾವ ಮುಖ ಇಟ್ಟುಕೊಂಡು ಈಗ ಇನ್ನೊಂದು ಬಜೆಟ್ ಮಂಡಿಸುತ್ತೀರಿ ಸ್ವಾಮಿ? ಕನ್ನಡಿಗರ ಕ್ಷಮೆ ಕೇಳಿ, ರಾಜೀನಾಮೆ ಕೊಟ್ಟು ಹೊರಡಿ. ಕರ್ನಾಟಕವನ್ನು ಉಳಿಸಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

