ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಕಾಲಮಿತಿಯೊಳಗೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಟಾನಕ್ಕೆ ಬರಬೇಕಾದರೆ ಜಿಲ್ಲೆಯ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಬಲವಾದ ಒತ್ತಡ ಹೇರಬೇಕೆಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಘೋಷಿಸಿರುವ ೫೩೦೦ ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಐದು ದಿನಗಳಿಂದಲೂ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಅನಿರ್ಧಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತಿರುವ ರೈತರನ್ನು ಶುಕ್ರವಾರ ಭೇಟಿಯಾಗಿ ಮಾತನಾಡಿದ ಜಿ.ಹೆಚ್.ತಿಪ್ಪಾರೆಡ್ಡಿರವರು ನಿಮ್ಮ ಮುಷ್ಕರ ನ್ಯಾಯೋಚಿತವಾಗಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿ ವರ್ಷದ ಬಜೆಟ್ನಲ್ಲಿ ಎರಡೆರಡು ಸಾವಿರ ಕೋಟಿ ರೂ.ಗಳನ್ನು ಇಟ್ಟಿದ್ದರೆ ಭದ್ರಾಮೇಲ್ದಂಡೆ ಯೋಜನೆ ಪೂರ್ಣಗೊಳ್ಳುತ್ತಿತ್ತು. ಈ ಬಾರಿಯ ಬಜೆಟ್ನಲ್ಲಿ ಭದ್ರಾಮೇಲ್ದಂಡೆ ಯೋಜನೆಗೆ ಪ್ರತ್ಯೇಕ ಹಣ ಘೋಷಿಸಿಲ್ಲ. ನೀರಾವರಿ ಇಲಾಖೆಗೆ ನೀಡಿರುವ ಹಣದಲ್ಲಿ ನಾಲ್ಕೈದು ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿಸಿಕೊಳ್ಳುವತ್ತ ನಿಗಾ ಹರಿಸಿ ಎಂದು ರೈತರಲ್ಲಿ ಮನವಿ ಮಾಡಿದರು.
ಕೇಂದ್ರ ಸರ್ಕಾರ ಭದ್ರಾಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರೂ.ಗಳನ್ನು ಘೋಷಿಸಿರುವುದು ನಿಜ. ಎಲ್ಲದಕ್ಕೂ ರಾಜ್ಯ ಸರ್ಕಾರ ಕೇಂದ್ರ ಕಡೆ ಕೈತೋರಿಸುವುದು ಸರಿಯಲ್ಲ. ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನಲ್ಲಿ ನೀರಾವರಿಗಾಗಿ ಹೋರಾಟ ನಡೆಯುತ್ತಿರುವುದು ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸಿದೆ. ನಿಮ್ಮ ಹೋರಾಟಕ್ಕೆ ಸದಾ ನನ್ನ ಬೆಂಬಲವಿರುತ್ತದೆ. ೧೯೯೪ ರಲ್ಲಿ ಪ್ರಥಮ ಬಾರಿಗೆ ಶಾಸಕನಾದಾಗಿನಿಂದಲೂ ರೈತರ ಪರವಾಗಿದ್ದೇನೆಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೆಡ್ಡಿಹಳ್ಳಿ ವೀರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊರಟಿಕೆರೆ ಮಹೇಶ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ, ಪ್ರಸನ್ನ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಚಿತ್ತಪ್ಪ, ಕಾರ್ಯದರ್ಶಿ ನಿರಂಜನ್, ಜಯಣ್ಣ, ಚಂದ್ರಮೌಳಿ, ಸತೀಶ್, ಇಂದೂದರ್, ಮಹದೇವಪ್ಪ ಇನ್ನು ಅನೇಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

