ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಧ್ಯ ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ನಾಯಕನಹಟ್ಟಿಯಲ್ಲಿ ಶುಕ್ರವಾರ ದೊಡ್ಡರಥೋತ್ಸವ ಜರುಗಿತು. ಮಧ್ಯಾಹ್ನ 2 ಗಂಟೆಯಿಂದಲೇ ಒಳಮಠದಲ್ಲಿ ಮುಖ್ಯ ಅರ್ಚಕರ ನೇತೃತ್ವದಲ್ಲಿ ಉತ್ಸವ ಮೂರ್ತಿ ಹೊತ್ತು ತರುವ ಪಲ್ಲಕ್ಕಿಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಸಿಂಗರಿಸಲಾಯಿತು. ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ, ರಥೋತ್ಸವದ ಬಳಿ ತಂದು ಸಜ್ಜುಗೊಳಿಸಲಾಯಿತು. ಮಧ್ಯಾಹ್ನ 3.33 ರ ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ಅಸಂಖ್ಯ ಭಕ್ತರು ತಿಪ್ಪೇರುದ್ರಸ್ವಾಮಿ ರಥವನ್ನು ರಥ ತೇರುಬೀದಿಯಿಂದ ಹೊರಮಠದವರೆಗೆ ಎಳೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ರಥವು ತೇರು ಬೀದಿಯಿಂದ ಪಾದಗಟ್ಟೆಯವರೆಗೆ ಚಲಿಸುವಾಗ ಭಕ್ತರು ರಥಕ್ಕೆ ಬಾಳೆಹಣ್ಣು, ಕಾಳುಮೆಣಸು, ಧವನ, ಹೂವು, ಚೂರು ಬೆಲ್ಲವನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತಾ ‘ ಶ್ರೀ ತಿಪ್ಪೇರುದ್ರಸ್ವಾಮಿಗೆ ಜಯವಾಗಲಿ’, ‘ಕಾಯಕ ಯೋಗಿಗೆ ಜಯವಾಗಲಿ’ ತಿಪ್ಪೇರುದ್ರಸ್ವಾಮಿ ಮಹಾರಾಜ್ ಕಿ ಜೈ ಎನ್ನುವ ಜಯಘೋಷ ಕೂಗುತ್ತಾ ರಥದ ದೊಡ್ಡ ಗಾತ್ರದ ಮಿಣಿ ಹಗ್ಗ ಎಳೆದು ಧನ್ಯರಾದರು. ನಾಡಿನ ಸುಭೀಕ್ಷೆ ಹಾಗೂ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ಸುಡು ಬಿಸಿಲ ನಡುವೆಯೂ ಲಕ್ಷಾಂತರ ಭಕ್ತರು ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಸಾಕ್ಷಿಯಾದರು.
ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಬೆಳಿಗ್ಗೆಯಿಂದಲೇ ಜಾತ್ರೆಗಾಗಿ ನಾಯಕನಹಟ್ಟಿಯತ್ತ ಮುಖ ಮಾಡಿದ್ದರು. ಗುರು ತಿಪ್ಪೇರುದ್ರಸ್ವಾಮಿಯ ಹೊರಮಠ ಹಾಗೂ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಹಾಮಹಿಮನ ನೆನಪಿಗಾಗಿ ಜಾತ್ರೆ ಆಚರಣೆ:
ಒಳಮಠದ ಪ್ರಧಾನ ಅರ್ಚಕರಾದ ಶಿವಲಿಂಗಣ್ಣ, ದೊಡ್ಡ ರಥೋತ್ಸವದ ಹಿನ್ನಲೆ ಕುರಿತು ಮಾತನಾಡಿ, ನಾಯಕನಹಟ್ಟಿಯಲ್ಲಿ ಒಳಮಠ, ಹೊರಮಠ ಮತ್ತು ಏಕಾಂತ ಮಠ ಎಂಬ ಮೂರು ಮಠಗಳಿದ್ದು, ಎಲ್ಲಾ ಮಠಗಳ ಸಮನ್ವಯದೊಂದಿಗೆ ಈ ಬೃಹತ್ ರಥೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿಸುತ್ತವೆ. ಶ್ರೀ ತಿಪ್ಪೇರುದ್ರಸ್ವಾಮಿಗಳು ಐಕ್ಯರಾದ ನೆನಪಿಗಾಗಿ ಪ್ರತಿ ವರ್ಷ ಈ ಐದು ದಿನಗಳ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ಇಲ್ಲಿನ ಅತ್ಯಂತ ಪವಿತ್ರವಾದ ಸಂಪ್ರದಾಯವಾಗಿದೆ.

ಫಾಲ್ಗುಣ ಮಾಸದ ಚಿತ್ತಾ ನಕ್ಷತ್ರದ ಸುಸಂದರ್ಭದಲ್ಲಿ ದೊಡ್ಡ ರಥೋತ್ಸವ ಜರುಗುತ್ತದೆ. ಜಾತ್ರೆಯ ವಿಶೇಷ ಆಚರಣೆ ಎಂದರೆ ಕೊಪ್ಪರಿಕೆ ಸುಡುವುದು. ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವುದೇ ಇದರ ಮೂಲ ಆಶಯ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಹರಕೆಯ ರೂಪದಲ್ಲಿ ಕೊಪ್ಪರಿಕೆಯಲ್ಲಿ ಒಣಕೊಬ್ಬರಿಯನ್ನು ಸುಡುವ ಸೇವೆಯನ್ನು ಅರ್ಪಿಸುತ್ತಾರೆ ಎಂದು ವಿವರಿಸಿದರು.
ಮಾಡಿದಷ್ಟು ನೀಡು ಭಿಕ್ಷೆ: ನಿತ್ಯ ದಾಸೋಹ
ಶ್ರೀ ತಿಪ್ಪೇರುದ್ರಸ್ವಾಮಿಯವರು “ಮಾಡಿದಷ್ಟು ನೀಡು ಭಿಕ್ಷೆ” ಎಂಬ ತತ್ವದಡಿ ಸಮಾಜ ಸೇವೆ ಮಾಡಿದವರು. ಅವರ ಸನ್ನಿಧಿಯಲ್ಲಿ ನಿತ್ಯವೂ ದಾಸೋಹದ ವ್ಯವಸ್ಥೆ ಇರುತ್ತದೆ. ಶ್ರೀ ಕ್ಷೇತ್ರದ ಭಕ್ತೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ವಿಮಲಾಕ್ಷೀ ಜಾತ್ರೆಯ ಮಹತ್ವದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು. ನಾಯಕನಹಟ್ಟಿಯಲ್ಲಿ ನಡೆಯುವ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಯು ಮಧ್ಯ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ. ಈ ಜಾತ್ರೆಗೆ ಕೇವಲ ಕರ್ನಾಟಕದವರು ಮಾತ್ರವಲ್ಲದೇ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡುಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಈ ರಥೋತ್ಸವಕ್ಕೆ ಬಹಳಷ್ಟು ಜನರು ಪಾದಯಾತ್ರೆಯ ಮೂಲಕ ಬಂದು ತಮ್ಮ ಭಕ್ತಿ ಸಲ್ಲಿಸುತ್ತಾರೆ, ಅಲ್ಲದೇ ರಥೋತ್ಸವದ ಸಂದರ್ಭದಲ್ಲಿ ದವನ, ಕಾಳು ಮೆಣಸು ಮತ್ತು ಬಾಳೆಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ಜನರು ತಮ್ಮ ಇμÁ್ಟರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಮದುವೆಯಾದ ಹೊಸ ದಂಪತಿಗಳು ರಥದ ಕಳಸವನ್ನು ನೋಡಿದರೆ ಸಂತಾನ ಭಾಗ್ಯ ಲಭಿಸುತ್ತದೆ ಎಂಬ ದೃಢವಾದ ನಂಬಿಕೆಯಿದೆ. ಇದರಿಂದಾಗಿ ಹೊಸ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸುತ್ತಾರೆ ಎಂದು ತಿಳಿಸಿದರು.
ರೂ.32 ಲಕ್ಷಕ್ಕೆ ಮುಕ್ತಿಭಾವುಟ ಹರಾಜು:
ರಥೋತ್ಸವಕ್ಕೂ ಮುನ್ನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಭಾವುಟದ ಹರಾಜು ನಡೆಸಲಾಯಿತು. ಈ ವರ್ಷದ ಮುಕ್ತಿ ಭಾವುಟವನ್ನು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಹೆಂಜಲಗೆರೆಯ ಶ್ರೀನಾಥ್ ಅವರು 32 ಲಕ್ಷ ಗಳಿಗೆ ಹರಾಜು ಮೂಲಕ ಪಡೆದುಕೊಂಡರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ ಬಾಬು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಸೇರಿದಂತೆ ಮತ್ತಿತರರು ಇದ್ದರು.

