ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾ.11 ರಿಂದ ಪಾದಯಾತ್ರೆ- ಶ್ರೀಷಡಕ್ಷರಮುನಿ ದೇಶಿ ಕೇಂದ್ರ ಸ್ವಾಮೀಜಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾರ್ಚ್-11 ರಿಂದ ದಾವಣಗೆರೆ ಜಿಲ್ಲೆಯ ಹರಿಹರದ ಹೋರಾಟಗಾರ ಪ್ರೊ.ಬಿಕೃಷ್ಣಪ್ಪ ಇವರ ಮುಕ್ತಿಧಾಮದಿಂದ ಆರಂಭವಾಗಿ ಚಿತ್ರದುರ್ಗ-ಶಿರಾ-ತುಮಕೂರು ಮಾರ್ಗವಾಗಿ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೋಡಿಹಳ್ಳಿ ಶ್ರೀಆದಿಜಾಂಬವ ಬೃಹನ್ಮಠದ ಶ್ರೀಷಡಕ್ಷರಮುನಿ ದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಈ ಪಾದಯಾತ್ರೆಯಲ್ಲಿ ಮಾದಾರಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ, ಐಮಂಗಳದ ಶಿವಶರಣ ಹರಳಯ್ಯ ಗುರುಪೀಠದ ಶ್ರೀಬಸವ ಹರಳಯ್ಯ ಸ್ವಾಮೀಜಿ, ಹೋಸಪೇಟೆಯ ಮಾತಂಗ ಗುರುಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ಮಾಗಡಿಯ ಪಾಲನಹಳ್ಳಿ ಮಠದ ಶ್ರೀ ಡಾ.ಸಿದ್ಧರಾಜು ಸ್ವಾಮೀಜಿ ಸೇರಿದಂತೆ ಇಡೀ ಕರ್ನಾಟಕದ ಇತರೆ ಗುರುಪೀಠಗಳ ಸ್ವಾಮೀಜಿಗಳನ್ನು ಸಮಾಜದ ನಾಯಕರು, ಮುಖಂಡರು, ಶಾಸಕರು, ಸಂಸದರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದು ಸ್ವಾಮೀಜಿ ತಿಳಿಸಿದರು.

- Advertisement - 

ಮಾದಿಗ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ಸಿದ್ದರಾಮಯ್ಯ ಸರ್ಕಾರ ವಂಚಿಸುತ್ತಿದೆ ಎಂದು ಸ್ವಾಮೀಜಿ ಆರೋಪಿಸಿದರು.
ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಮಾದಿಗ ಸಮಾಜದ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಷಡಕ್ಷರಮುನಿ ಸ್ವಾಮೀಜಿ ಆರೋಪಿಸಿದರು.

ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು, ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ತಕ್ಷಣ ಕ್ರಮ‌ವಹಿಸುವಂತೆ ಸೂಚಿಸಿದೆ. ಆದೇಶ ಬಂದು ವರ್ಷ ಕಳೆದರೂ ಸಿಎಂ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ಮುಂದಾಗುತ್ತಿಲ್ಲ. ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗಾಗಿ ಒತ್ತಾಯಿಸಿ ಮಾದಿಗ ಸಮುದಾಯ ಸಂಘಟನೆಗಳಿಂದ ಅರೆಬೆತ್ತಲೆ ಪ್ರತಿಭಟನೆ ಸೇರಿದಂತೆ ನಾನಾ ರೀತಿಯ ಪ್ರತಿಭಟನೆಗಳನ್ನ ಮಾಡಿದ್ದಾರೆಂದು ಶ್ರೀಗಳು ನೆನೆದರು.

- Advertisement - 

ಒಳ ಮೀಸಲಾತಿ ಜಾರಿ ಮಾಡದ ಸರ್ಕಾರ ಈಗ 56,432 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಸರ್ಕಾರದ ಈ ನಡೆ ಮಾದಿಗ ಸಮಾಜಕ್ಕೆ ಮರಣ ಶಾಸನವಾಗಲಿದೆ ಎಂದು ಷಡಕ್ಷರಮುನಿ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಒಳ ಮೀಸಲಾತಿಗಾಗಿ ನಡೆಯುವ ಪಾದಯಾತ್ರೆ ಪೂರ್ಣಗೊಂಡ ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಮಾಡಲಾಗುತ್ತದೆ ಎಂದು ಷಡಕ್ಷರಮುನಿ ಸ್ವಾಮೀಜಿ ಎಚ್ಚರಿಸಿದರು.

ಮಾದಿಗ ಸಮಾಜದಿಂದ ಆಯೋಜನೆ ಮಾಡಲಾಗುತ್ತಿರುವ ಪಾದಯಾತ್ರೆಯಲ್ಲಿ ದಲಿತ ಮುಖಂಡರು, ಹೋರಾಟಗಾರರು, ದಲಿತ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಸಮುದಾಯದ ಮುಖಂಡರು ವಿದ್ಯಾರ್ಥಿ ಸಮುದಾಯ ಮತ್ತಿತರರು ಪಾದಯಾತ್ರೆಗೆ ಕೈಜೋಡಿಸಲಿದ್ದಾರೆ ಎಂದು ಷಡಕ್ಷರಮುನಿ ಸ್ವಾಮೀಜಿಗಳು ತಿಳಿಸಿದ್ದಾರೆ.

 

Share This Article
error: Content is protected !!
";