ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಮುಳ್ಳಿನ ಗುಲಾಬಿ “ ಆಶಾಗುರುಲಿಂಗಯ್ಯ ನಿರ್ದೇಶಕ–ಸ್ಮೈಲ್ ಶಿವು
ಮಹಿಳಾದಿನದ ವಿಶೇಷ : ಮುಳ್ಳಿನ ಗುಲಾಬಿ ಪೋಸ್ಟರ್ ಬಿಡುಗಡೆ
ಹಿರಿಯನಟ ಅನಂತನಾಗ್, ಆರತಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಮುಳ್ಳಿನ ಗುಲಾಬಿ 1982ರಲ್ಲಿ ತೆರೆಕಂಡಿತ್ತು. 44 ವರ್ಷಗಳ ನಂತರ ಮತ್ತೊಮ್ಮೆ ಅದೇ ಹೆಸರಿನಲ್ಲಿ ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಚಿತ್ರವೊಂದು ನಿರ್ಮಾಣವಾಗುತ್ತಿದೆ.
ಒಂದು ಹೆಣ್ಣು ತನ್ನ ಕಾಲೇಜ್ ಲೈಫಲ್ಲಿ, ಚಿಕ್ಕವಯಸಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಅತ್ತೆ, ಮಾವನ ಕಡೆಯಿಂದ ಏನೆಲ್ಲ ಕಿರುಕುಳ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾಳೆ, ಕೊನೆಗೆ ಅದನ್ನೆಲ್ಲ ಎದುರಿಸಿ ಹೇಗೆ ಸಮಾಜದಲ್ಲಿ ಬೆಳೆದು ನಿಲ್ಲುತ್ತಾಳೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.
ಲೇಖಕಿ ಆಶಾ ಗುರುಲಿಂಗಯ್ಯ ಅವರು ರಚಿಸಿರುವ ಕಾದಂಬರಿಯನ್ನಾಧರಿಸಿ ತಯಾರಾಗುತ್ತಿರುವ ‘ಮುಳ್ಳಿನ ಗುಲಾಬಿ‘ ಚಿತ್ರಕ್ಕೆ ಸ್ಮೈಲ್ ಶಿವು ಅವರು ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ನಿಸರ್ಗ ಎಂಬ ಚಿತ್ರ ನಿರ್ದೇಶಿಸಿದ್ದ ಸ್ನೈಲ್ ಶಿವು ಅವರ ಸಾರಥ್ಯದ ಎರಡನೇ ಚಿತ್ರವಿದು.
ನಿನ್ನೆ ನಡೆದ ಮಹಿಳಾ ದಿನಾಚರಣೆಯ ಅಂಗವಾಗಿ, ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಈ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆರವೇರಿತು.
ವೇದಿಕೆಯಲ್ಲಿ ಸಹಾಯಕಪೊಲೀಸ್ ಕಮೀಷನರ್ ಡಾ.ಪ್ರಿಯದರ್ಶಿನಿ ಈಶ್ವರ್ ಸಾಣೆಕೊಪ್ಪ ಅವರು ಮುಳ್ಳಿನ ಗುಲಾಬಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ನಟ ಮೈಸೂರು ರಮಾನಂದ್ ಅವರು ಹಾಜರಿದ್ದರು.
ಭೂಮಿಕಾ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಕೆ. ಶಿವಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕಥಾಲೇಖಕಿ ಆಶಾ ಗುರುಲಿಂಗಯ್ಯ ಅವರೇ ಸಮಾಜದಲ್ಲಿ ನೊಂದ ಹೆಣ್ಣುಮಕ್ಕಳ ಪ್ರತಿನಿಧಿಯಾದ, ನಾಯಕಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರವಿ ಸುವರ್ಣ ಅವರ ಛಾಯಾಗ್ರಹಣ, ವಿನು ಮನಸು ಅವರ ಸಂಗೀತ ಸಂಯೋಜನೆ, ಮನ್ವರ್ಷಿ ಹಾಗೂ ವೇಣು ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಸಧ್ಯದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಲಿದೆ.

