ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆ ಹತ್ತಿರವಾದಾಗ ಕಾಣದ ‘ತೆರೆಮರೆ ಜಾತ್ರೆ’… ಜನತೆ ತಿಳಿಯಬೇಕಾದ ನಿಜಗಳು…..
ಚುನಾವಣೆ ಬಂದಾಗ ಮಾತ್ರ ನಾಯಕರಿಗೆ ಜನರ ಮನೆಗಳ ದಾರಿ ಕಾಣುತ್ತದೆಯೇ?
ಗೃಹಪ್ರವೇಶದಿಂದ ಶವಸಂಸ್ಕಾರವರೆಗೂ ರಾಜಕೀಯ ಹಾಜರಾತಿ ಸಹಾನುಭೂತಿ ಅಥವಾ ಮತಗಳ ಲೆಕ್ಕಾಚಾರ?. ಹಾರ, ಬ್ಯಾಂಡ್, ಬ್ಯಾನರ್‌ಗಳ ಮೆರವಣಿಗೆ– ಜನಸೇವೆನಾ ಅಥವಾ ಹಣ ಅಥವಾ ಶಕ್ತಿ ಪ್ರದರ್ಶನವೇ?
ಸೋಶಿಯಲ್ ಮೀಡಿಯಾದ ಜೈಕಾರ ನಿಜವಾದ ಜನಬೆಂಬಲವೇ ಅಥವಾ ಪ್ರಾಯೋಜಿತ ಪ್ರಚಾರವೇ?.
ಮದುವೆ, ನಾಮಕರಣ, ದೇವಸ್ಥಾನ ಪೂಜೆ ಎಲ್ಲೆಡೆ ರಾಜಕೀಯ ಹಾಜರಾತಿ ಏಕೆ?. ಯುವಕರಿಗೆ ಸಿಗುತ್ತಿರುವುದು ಸೇವೆಯ ಅವಕಾಶವೋ ಅಥವಾ ತಾತ್ಕಾಲಿಕ ರಾಜಕೀಯ ಉದ್ಯೋಗವೋ?. ಕಾಫಿ ಕುಡಿಯುವ ಭೇಟಿ ಕೂಡ ರಾಜಕೀಯ ಕಾರ್ಯಕ್ರಮವಾಗುತ್ತಿರುವುದೇಕೆ?. ಸ್ವಾಗತದ ಅಬ್ಬರದಿಂದ ನಾಯಕತ್ವವನ್ನು ಅಳೆಯಬಹುದೇ?. ಚುನಾವಣೆಗೂ ಮುಂಚೆ ನಡೆಯುವ ಕಾರ್ಯಕ್ರಮಗಳು ಜನ ಪ್ರೀತಿಯ ಸಂಕೇತವೇ ಅಥವಾ ರಾಜಕೀಯ ಹೂಡಿಕೆವೇ?. ಜಾಗೃತ ಮತದಾರರು ಪ್ರಶ್ನಿಸದಿದ್ದರೆ ಸ್ವಚ್ಛ ರಾಜಕೀಯ ಸಾಧ್ಯವೇ? ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಕ್ಷೇತ್ರಗಳಲ್ಲಿ ಒಂದು ವಿಭಿನ್ನ ವಾತಾವರಣ ಆರಂಭವಾಗುತ್ತದೆ. ಹೊರಗೆ ನೋಡಿದರೆ ಅದು ಜನಸಂಪರ್ಕ, ಸೇವಾಭಾವ ಮತ್ತು ಅಭಿವೃದ್ಧಿಯ ಚರ್ಚೆಯಂತೆ ಕಾಣಬಹುದು. ಆದರೆ ಈ ಅಬ್ಬರದ ಹಿಂದೆ ನಡೆಯುವ ಕೆಲವು ಸಂಗತಿಗಳು ಜನರು ಗಂಭೀರವಾಗಿ ಗಮನಿಸಬೇಕಾದಂತಿವೆ.
ಹೊಸ ಹೊಸ ಆಕಾಂಕ್ಷಿಗಳು ಕ್ಷೇತ್ರ ಪರ್ಯಟನೆ ಆರಂಭಿಸುತ್ತಾರೆ. ಪ್ರತಿದಿನವೂ ಯಾವುದೋ ಒಂದು ಕಾರ್ಯಕ್ರಮ. ಮಾರಿ ಹಬ್ಬ, ಊರ ಜಾತ್ರೆ, ಕ್ರಿಕೆಟ್, ಕ್ರೀಡಾಕೂಟ, ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಒಂದಲ್ಲ ಒಂದು ನಡೆಯುತ್ತಲೇ ಇರುತ್ತದೆ. ಜನರ ಜೊತೆ ಬೆರೆತು ಕಾಣಿಸಿಕೊಳ್ಳುವುದು ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗುವುದಿಲ್ಲ.
ಚುನಾವಣೆಯ ಸಮಯದಲ್ಲಿ ಕೆಲವು ರಾಜಕೀಯ ಟಿಕೆಟ್ ಆಕಾಂಕ್ಷಿಗಳು ಹಳ್ಳಿಗಳಲ್ಲಿ ನಡೆಯುವ ಪ್ರತಿಯೊಂದು ಕುಟುಂಬದ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಗೃಹಪ್ರವೇಶವಾಗಲಿ, ಮದುವೆಯಾಗಲಿ, ನಾಮಕರಣವಾಗಲಿ, ದೇವಸ್ಥಾನ ಪೂಜೆ ಆಗಲಿ ಹೀಗೆ ಎಲ್ಲೆಡೆ ಅವರ ಹಾಜರಾತಿ ಸಾಮಾನ್ಯ. ಕೆಲವೊಮ್ಮೆ ಸಾವು, ತಿಥಿ ಮುಂತಾದ ದುಃಖದ ಸಂದರ್ಭಗಳಲ್ಲೂ ಸಹ ಸಹಾನುಭೂತಿ ತೋರಿಸುವ ನೆಪದಲ್ಲಿ ಹಾಜರಾತಿ ಕಡ್ಡಾಯ ಮಾಡಿಕೊಂಡಿರುತ್ತಾರೆ.
ಹೊರಗೆ ನೋಡಿದರೆ ಇದು ಜನರೊಂದಿಗೆ ಹತ್ತಿರದ ಸಂಬಂಧ ಬೆಳೆಸುವ ಪ್ರಯತ್ನದಂತೆ ಕಾಣಬಹುದು. ಆದರೆ ಕೆಲವೊಮ್ಮೆ ಇದು ರಾಜಕೀಯ ಲೆಕ್ಕಾಚಾರದ ಭಾಗವಾಗಿಯೇ ನಡೆಯುತ್ತಿದೆ ಎಂಬ ಅನುಮಾನವೂ ಮೂಡುತ್ತದೆ.
ರಾಜಕೀಯ ಪ್ರವೇಶ ಅಥವಾ ಟಿಕೆಟ್ ಆಕಾಂಕ್ಷಿ ಯಾವ ಹಳ್ಳಿಗೆ ಬಂದರೂ ಸ್ವಾಗತ ಭರ್ಜರಿಯಾಗಿರಬೇಕು ಎಂಬುದು ಕೆಲವರ ಮನಸ್ಸಿನ ನಿಯಮವಾಗಿಬಿಡುತ್ತದೆ. ತಮಟೆ, ಕಾಳೆ, ಬ್ಯಾಂಡ್, ಹಾರ, ತೂರಾಯಿಗಳು, ಬ್ಯಾನರ್‌ಗಳು, ಪೋಸ್ಟರ್, ಬಟ್ಟಿಂಗ್ಸ್ ಗಳು. ಇವೆಲ್ಲವೂ ಅಬ್ಬರದಿಂದ ಇರಬೇಕು. ಆದರೆ ಈ ಎಲ್ಲದಕ್ಕೂ ಖರ್ಚು ಯಾರು ಮಾಡುತ್ತಾರೆ ಎಂದು ಕೇಳಿದರೆ ಉತ್ತರ ಬಹುತೇಕ ಒಂದೇ ರಾಜಕೀಯ ಟಿಕೆಟ್ ಆಕಾಂಕ್ಷಿಯೇ!.
ಹಳ್ಳಿಗೆ ಬಂದಾಗ ಹೆಣ್ಣು ಮಕ್ಕಳು ಆರತಿ ತೆಗೆದು ಓಕಳಿ ಒಯ್ಯುವ ಸಂಪ್ರದಾಯದಂತೆ ಕಾಣುವ ಕಾರ್ಯಕ್ರಮಗಳೂ ನಡೆಯುತ್ತವೆ. ಇನ್ನೂ ಮಹಿಳಾ ಆಕಾಂಕ್ಷಿಗಳಾದರೆ ಸೀರೆ, ಕುಂಕುಮ ಕೊಟ್ಟು ಹೂಡಿ ತುಂಬುವ ಕಾರ್ಯಗಳು ನಿರಂತರ. ಆದರೆ ಅದು ಸಹ ಉಚಿತವಾಗಿ ನಡೆಯುವ ಸಂಗತಿ ಅಲ್ಲ. ಆರತಿ ತಟ್ಟೆಗೆ ಹಣ ಹಾಕಲೇಬೇಕು ಎಂಬುದು ಅಲ್ಲಿನ ಅಲಿಖಿತ ನಿಯಮವಾಗಿ ಮಾರ್ಪಟ್ಟಿರುವುದೂ ಒಂದು ವಾಸ್ತವ.
ಒಂದು ಕಾಫಿ ಕುಡಿಯಲು ಹೋದರೂ ಅದಕ್ಕೂ ದೊಡ್ಡ ಸಂಭ್ರಮ ಸೃಷ್ಟಿಸಲಾಗುತ್ತದೆ. ಕೆಲವೊಮ್ಮೆ ಕಾಫಿಗಿಂತ ಅದರ ಸುತ್ತ ನಡೆಯುವ ಪ್ರದರ್ಶನಕ್ಕೆ ಖರ್ಚಾಗುವ ಹಣವೇ ಹೆಚ್ಚು ಎನ್ನುವುದು ನಿಜ. ಈ ಆಯೋಜನೆಗಳಿಂದೆ ಶ್ರಮ ಪಡುವ ಪಡ್ಡೆಗಳ ರಾತ್ರಿ ಎಣ್ಣೆ-ತುಂಡು ಪಾರ್ಟಿಗಳಿಗೂ ಕಮ್ಮಿ ಇಲ್ಲ.
ಈ ಸಮಯದಲ್ಲಿ ಮತ್ತೊಂದು ವಾಸ್ತವವೂ ಗೋಚರಿಸುತ್ತದೆ. ಉದ್ಯೋಗವಿಲ್ಲದೆ ತಿರುಗುವ ಕೆಲವು ಯುವಕರಿಗೆ ಹೊಸ ಕೆಲಸಗಳು ದೊರೆಯುತ್ತವೆ. ಅಂದರೆ ಹೊಸ ಹೊಸ ಟಿಕೆಟ್ ಆಕಾಂಕ್ಷಿಗಳ ಪರವಾಗಿ ಜೈಕಾರ ಹಾಕುವುದು, ಕಾರ್ಯಕ್ರಮ ಆಯೋಜಿಸುವುದು, ಸೋಶಿಯಲ್ ಮೀಡಿಯಾದಲ್ಲಿ ವಾದವಿವಾದ ನಡೆಸುವುದು ಇವೆಲ್ಲವೂ ಒಂದು ರೀತಿಯ *“ತಾತ್ಕಾಲಿಕ ರಾಜಕೀಯ ಉದ್ಯೋಗಿಳಾಗಿ ಕಾಣಿಸಿಕೊಳ್ಳುತ್ತವೆ.
ನಗರದ ಸುತ್ತಮುತ್ತ ಇರುವ ಡಾಬಾಗಳು ಅಥವಾ ಹೋಟೆಲ್‌ಗಳಲ್ಲಿ ಇತ್ತೀಚೆಗೆ ಕುಗ್ರಾಮಗಳಲ್ಲೂ ಕಾಣ ಸಿಗುವ ಡಾಬಾಗಳಲ್ಲಿ ಸಂಜೆ ಹೊತ್ತಿಗೆ ಯುವಕರ ದರ್ಬಾರ್ ಆರಂಭವಾಗುತ್ತದೆ. ಅಲ್ಲಿ ರಾಜಕೀಯ ಚರ್ಚೆಗಳು, ಯೋಜನೆಗಳು, ಸೋಶಿಯಲ್ ಮೀಡಿಯಾದ ಪೋಸ್ಟ್‌ಗಳು ಎಲ್ಲವೂ ರೂಪುಗೊಳ್ಳುತ್ತವೆ. ಕೆಲವೊಮ್ಮೆ ಇದು ಜನಾಭಿಪ್ರಾಯಗಳನ್ನು ಪ್ರಭಾವಿಸಲು ಬಳಸುವ ಸಾಧನವೂ ಆಗುತ್ತದೆ.

ಆದರೆ ಪ್ರಶ್ನೆ ಒಂದೇ ಇದು ನಿಜವಾದ ಜನಸೇವೆಯಾ? ಅಥವಾ ಚುನಾವಣೆಗೆ ಮುಂಚೆ ನಡೆಯುವ ‘ತೆರೆಮರೆ ರಾಜಕೀಯ ಹೂಡಿಕೆ’ನಾ?. ಜನರು ಈ ಎಲ್ಲಾ ಸಂಗತಿಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಕಾರ್ಯಕ್ರಮಗಳ ಅಬ್ಬರ, ಭರ್ಜರಿ ಸ್ವಾಗತದ ಪೋಸ್ಟರ್, ಸೋಶಿಯಲ್ ಮೀಡಿಯಾದ ಜೈಕಾರ ಇವೆಲ್ಲವೂ ಯಾವಾಗಲೂ ನಿಜವಾದ ಜನಾಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ಮತದಾರರು ಒಂದು ವಿಚಾರವನ್ನು ಮರೆಯಬಾರದು. ಸ್ವಾಗತದ ಹಾರ-ತೂರಾಯಿಗಳು ದೊಡ್ಡದಾಗಿದ್ದರೆ ನಾಯಕ ದೊಡ್ಡವನಾಗುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಜೈಕಾರ ಹೆಚ್ಚಿದ್ದರೆ ಜನಬೆಂಬಲ ಹೆಚ್ಚಾಗಿದೆ ಎಂಬುದಿಲ್ಲ.
ನಾಯಕನ ಮೌಲ್ಯವನ್ನು ನಿರ್ಧರಿಸಬೇಕಾದದ್ದು ರಾಜಕೀಯ ಟಿಕೆಟ್ ಆಕಾಂಕ್ಷಿಗಳವರ ಕೆಲಸ, ನಿಷ್ಠೆ ಮತ್ತು ಜನಪರ ಚಿಂತನೆಯ ಆಧಾರದ ಮೇಲೆ ಮಾತ್ರ.
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಆದರೆ ಆ ಹಬ್ಬದ ಹಿಂದೆ ನಡೆಯುವ ಹಣದ ಆಟ, ನಾಟಕೀಯತೆ ಮತ್ತು ಪ್ರಾಯೋಜಿತ ಕಾರ್ಯಕ್ರಮಗಳನ್ನು ಅರಿತುಕೊಂಡಾಗ ಮಾತ್ರ ಜನತೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು. ಜಾಗೃತ ಮತದಾರರು ಇದ್ದರೆ ಮಾತ್ರ ಸ್ವಚ್ಛ ರಾಜಕೀಯ ಸಾಧ್ಯ.
ಲೇಖನ:ಶ್ರೀನಿವಾಸ್ ಕೆ ಟಿ, ಬೆಂಗಳೂರು.

