ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಒಳ ಮೀಸಲಾತಿ ವಿರೋಧಿಗಳ ಮಾತು ಕೇಳಿಕೊಂಡು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ನಂಬಿರುವ ಸಿದ್ದಾಂತಗಳಿಗೆ ದ್ರೋಹವೆಸಗುತ್ತಿರುವುದರಿಂದ ಮಾದಿಗರು ಅನ್ಯಾಯಕ್ಕೊಳಗಾಗುತ್ತಿದ್ದಾರೆಂದು ಜನತಂತ್ರ ಸಂರಕ್ಷಣೆಗಾಗಿ ಆಂದೋಲನದ ರಾಜ್ಯ ಪ್ರಧಾನ ಸಂಚಾಲಕರ ಪ್ರೊ.ಸಿ.ಕೆ.ಮಹೇಶ್ ಕಟುವಾಗಿ ಟೀಕಿಸಿದರು.
ಒಳ ಮೀಸಲಾತಿ ಅನ್ವಯ ರಾಜ್ಯ ಸರ್ಕಾರ ೫೬,೪೩೨ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಸ
ಮಾದಿಗ ರಾಜಕಾರಣಿಗಳು ಮತ್ತು ಮಾದಿಗರ ಮತಗಳನ್ನು ಪಡೆದು ಗೆದ್ದಿರುವ ಶಾಸಕರು, ಸಂಸದರುಗಳು ಒಳ ಮೀಸಲಾತಿಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ಒಳ ಮೀಸಲಾತಿ ಜಾರಿಯಾಗುವುದು ಬೇಕಿಲ್ಲ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ. ನಡೆಯಲ್ಲಿ ಮನುವಾದ ಅನುಸರಿಸುತ್ತಿದ್ದಾರೆ.
ದೇಶದ ಇಪ್ಪತ್ತು ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ. ಒಳ ಮೀಸಲಾತಿಯನ್ನು ಜಾರಿಗೆ ತಂದಿದ್ದರೆ ಬೇರೆ ರಾಜ್ಯಗಳಲ್ಲಿ ತನ್ನಷ್ಟಕ್ಕೆ ತಾನೆ ಒಳ ಮೀಸಲಾತಿ ಅನುಷ್ಟಾನಕ್ಕೆ ಬರುತ್ತಿತ್ತು. ನಮ್ಮ ಮತಗಳಿಂದ ಗೆದ್ದಿರುವ ಮಾದಿಗರು ಹಾಗೂ ಮೇಲ್ಜಾತಿಯ ಶಾಸಕರು ಸಂಸದರು ಒಳ ಮೀಸಲಾತಿಗೆ ಸಂಬಂಧಿಸಿದಂತೆ ನಿಖರವಾದ ನಿಲುವು ತೆಗೆದುಕೊಳ್ಳದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ. ೧೫೦ ಕ್ಷೇತ್ರಗಳಲ್ಲಿ ೪೦ ರಿಂದ ೪೫ ಮಾದಿಗರ ಮತಗಳಿದ್ದು, ಚುನಾವಣೆಯಲ್ಲಿ ಮತಗಳನ್ನು ಮಾರಿಕೊಳ್ಳದೆ ಕಾಪಾಡಿಕೊಳ್ಳುವ ಜಾಗೃತಿ ಮೂಡಿದಾಗ ಮುಂದೆ ರಾಜಕೀಯ ಶಕ್ತಿಯಾಗಿ ಬೆಳೆಯಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಒಳ ಮೀಸಲಾತಿಗಾಗಿ ಕಳೆದ ೩೫ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇಲ್ಲಿಯವರೆಗೂ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳು ಮಾದಿಗರಿಗೆ ವಂಚಿಸುತ್ತಲೆ ಕಾಲ ಕಳೆದಿವೆ. ಫೆ.೨೬ ರಂದು ರಾಜ್ಯಪಾಲರಿಂದ ಅನುಮೋದನೆಗೊಂಡ ಕಾಯಿದೆಯಂತೆ ಒಳ ಮೀಸಲಾತಿಗೆ ಒಳಪಡಿಸದೆ ೫೬,೪೩೨ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿರುವುದನ್ನು ನೋಡಿದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ ವಿರೋಧಿಗಳು ಎನ್ನುವುದು ಗೊತ್ತಾಗುತ್ತದೆ.
ಮಾದಿಗ ವಿರೋಧಿಗಳಾದ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪುರ ಇವರುಗಳು ಕೂಡಲೆ ರಾಜಿನಾಮೆ ನೀಡಿ ಹೊರಬರಬೇಕು. ಒಳ ಮೀಸಲಾತಿಯಂತೆ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದರೂ ಸಹ ಕೆಲವು ಮಾದಿಗ ರಾಜಕಾರಣಿಗಳು ಹೋರಾಟದ ಹಾದಿಯನ್ನು ತಪ್ಪಿಸುವ ಕುತಂತ್ರ ನಡೆಸುತ್ತಿರುವುದರಿಂದ ಒಳ ಮೀಸಲಾತಿ ವಿಳಂಬವಾಗುತ್ತಿದೆ ಎಂದು ಕಿಡಿ ಕಾರಿದರು.
ಕೆ.ಕುಮಾರ್, ದುರುಗೇಶ್, ಚಿಕ್ಕಣ್ಣ, ಟಿ.ರಾಮು, ರಾಮುಗೋಸಾಯಿ, ಸುಧಾಕರ್, ಪ್ರಭಾಕರ್, ರಾಮಲಿಂಗಪ್ಪ, ಸಂಪತ್, ಶಿವಣ್ಣ, ತಿಪ್ಪೇಸ್ವಾಮಿ ಇನ್ನು ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

