ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಯಲುಸೀಮೆಯ ಅತಿದೊಡ್ಡ ಜಾತ್ರೆಗಳಲ್ಲಿ ಕಣಿವೆ ಮಾರಮ್ಮ ಜಾತ್ರೆ ಸಹ ಒಂದಾಗಿದೆ. ಪಕ್ಕದ ಆಂಧ್ರ, ತಮಿಳುನಾಡುಗಳಿಂದ ಭಕ್ತರು ಆಗಮಿಸುವುದು ಇದರ ವಿಶೇಷವಾಗಿದೆ.
ಚಿತ್ರದುರ್ಗದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಜಾತ್ರೆಯು ಪಡೆದುಕೊಂಡಿದೆ. ಜಾತ್ರೆಯ ಆರಂಭದ ಹಿನ್ನಲೆಯಲ್ಲಿ ಅದರ ಇತಿಹಾಸ, ಆಚರಣೆಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.
ಕುಂಚಿಗನಾಳು ಗುಡ್ಡಗಳಿಂದ ಆವೃತವಾದ ಗ್ರಾಮವಾಗಿದೆ. ಚಿತ್ರದುರ್ಗದ ಪ್ರವೇಶಕ್ಕೆ ಹೆಬ್ಬಾಗಿಲಿನಂತಿದೆ. ಒಂದು ಕಾಲದಲ್ಲಿ ಸಮೃದ್ಧವಾದ ಕಾಡಿನಿಂದ ಆವೃತ್ತವಾಗಿದ್ದ ಇದು ನೂತನ ಶಿಲಾಯುಗದ ಅವಧಿಯ ಮಾನವನ ನೆಲೆಯಾಗಿತ್ತು.
ಡಾ.ಲಕ್ಷ್ಮಣ್ ತೆಲಗಾವಿಯವರು ತಂಡವು ಇಲ್ಲಿ ಕುಟ್ಟುಬಂಡೆ ಚಿತ್ರಗಳನ್ನು ಪತ್ತೆ ಮಾಡಿದೆ. ಕುಂಚಿಗನಾಳಿನಲ್ಲಿ ಸುಮಾರು ಐದು ಸಾವಿರ ವರ್ಷಗಳಿಂದಲು ಮಾನವನ ವಾಸದ ನೆಲೆಯಾಗಿತ್ತು. ಸೀನಪ್ಪನ ಮರಡಿಯಲ್ಲಿ ವೃತ್ತಕಾರದ ಸಮಾಧಿಗಳಿದ್ದುದರ ಬಗ್ಗೆ ದೇವೆಂದ್ರಪ್ಪ ಒಮ್ಮೆ ಪ್ರಸ್ತಾಪ ಸಹ ಮಾಡಿದ್ದರು. ೧೪ನೇ ಶತಮಾನದ ವಿಜಯನಗರ ಅರಸ ಪ್ರತಾಪದೇವರಾಯನ ಕಾಲಕ್ಕೆ ಕುಂಚಿಗನಾಳಿನ ಪ್ರಸ್ತಾಪ ಕಂಡು ಬರುತ್ತದೆ.
ಪ್ರತಾಪದೇವರಾಯನ ಕುಮಾರನಾದ ವೀರಮಲ್ಲಣ್ಣನು ಚಿತ್ರದುರ್ಗವನ್ನು ಆಳುತ್ತಿರುತ್ತಾನೆ. ತನ್ನ ತಂದೆ ತಾಯಿಗಳಿಗೆ ಪುಣ್ಯವಾಗಲೆಂದು ಕುಂಚಿಗನಹಳಿಯನ್ನು (ಕುಂಚಿಗನಾಳು) ಹಿಡಿಂಬೇಶ್ವರ ದೇವರ ಪೂಜಾ ಕಾರ್ಯಗಳಿಗೆ ದಾನ ಮಾಡುತ್ತಾನೆ. ಈ ಊರಿನಿಂದ ಬರುವ ಕಂದಾವು ಹಿಡಿಂಬ ದೇವರಿಗೆ ಸೇರುವಂತೆ ಶಾಸನ ಹೊರಡಿಸುತ್ತಾನೆ.
ಕುಂಚಿಗನಾಳನ್ನು ತನ್ನ ತಾಯಿಯಾದ ಮಲ್ಲವ್ವಳ ಹೆಸರಿನಲ್ಲಿ ಮಲ್ಲಪುರ ಎಂದು ಪುನರ್ ನಾಮಕರಣ ಮಾಡುತ್ತಾನೆ. ಈ ಶಾಸನದ ಮಾಹಿತಿಯು ಎಪಿಗ್ರಾಫಿಯ ಕರ್ನಾಟಕ ಸಂಪುಟ ೧೧, ಚಿತ್ರದುರ್ಗ ಶಾಸನಗಳು, ಪುಟ ೧೩ರಲ್ಲಿ ದೊರೆಯುತ್ತದೆ.
ಪಾಳೆಯಗಾರರ ದಾಖಲೆಗಳಲ್ಲಿ ಕುಂಚಿಗನಾಳು ಪ್ರಮುಖ ಉಕ್ಕಡವಾಗಿದ್ದ ಬಗ್ಗೆ ಮಾಹಿತಿ ಸಿಗುತ್ತದೆ. ಉಕ್ಕಡ ಎಂದರೆ ಸೇನಾನೆಲೆ ಎನ್ನಲಾಗುತ್ತದೆ ಬಹುತೇಕ ಗ್ರಾಮ್ಯ ಆಚರಣೆಗಳು ಈ ಊರಿನಲ್ಲಿ ಪ್ರಚಲಿತದಲ್ಲಿವೆ.
ಒಂದು ಕಾಲದಲ್ಲಿ ಕುಂಚಿಟಿಗ ಸಮುದಾಯದವರು ನೆಲೆನಿಂತ ಊರಾಗಿತ್ತು. ಕಾಲಾಂತರದಲ್ಲಿ ಅವರು ಮದಕರಿಪುರ, ಕೋವರಟ್ಟಿಗೆ ವಲಸೆ ಹೋದರು ಎಂಬ ಐತಿಹ್ಯವಿದೆ. ಕೋವೆರಟ್ಟಿಯಲ್ಲಿ ಇತ್ತೀಚಿಗೆ ಕಣಿವೆಮಾರಮ್ಮನ ದೇವಾಲಯ ಸಹ ನಿರ್ಮಿಸಲಾಗಿದೆ.
ಚಿತ್ರದುರ್ಗ ನವದುರ್ಗಿಯರಲ್ಲಿ ಒಬ್ಬಳಾದ ಕಣಿವೇ ಮಾರಮ್ಮಳ ಜಾತ್ರೆಯನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ದೇವಿಯ ಅರ್ಚಕರಾದ ಕಣುಮೇಶ್, ಗಿರೀಶ್, ಬೋರೇಶ್, ರಂಗಸ್ವಾಮಿ, ನಾಗಣ್ಣ ಮೊದಲಾದವರು. ಆಸಕ್ತಿ, ವಿನಮ್ರತೆಯಿಂದ ಪೂಜಿಸಿಕೊಂಡು ಬಂದಿದ್ದಾರೆ. ನವರಾತ್ರಿಯ ಸಂದರ್ಭದಲ್ಲಂತೂ ಕಣುಮೇಶ್, ಗಿರೀಶ್, ದತ್ತುರಾಜು, ಶ್ರೀಧರ್ ಬಹುವಿಶೇಷವಾಗಿ ದೇವಿಯನ್ನು ಅಲಂಕಾರ ಮಾಡುವರು. ಅದನ್ನು ನೋಡಲೆಂದೆ ಜನಸಾಗರ ಒಂಭತ್ತು ದಿನವು ಹರಿದು ಬರುತ್ತದೆ.
ಪಾಲ್ಗುಣ ಮಾಸದಲ್ಲಿ ದೇವಿಯ ಜಾತ್ರೆಯು ಪ್ರಾರಂಭವಾಗುತ್ತದೆ. ಮಂಗಳವಾರದಂದು ದೇವಿಯ ಮದುವಣಗಿತ್ತಿ ಶಾಸ್ತ್ರವು ನಡೆಯುತ್ತದೆ. ಒಂದು ವಿವಾಹ ಸಮಾರಂಭವೇ ಇಲ್ಲಿ ಏರ್ಪಾಡುತ್ತದೆ.
ಬಂಗೇರಹಟ್ಟಿಯ ಜನರು ದೇವಿಗೆ ಮಡಿಲಕ್ಕಿ ಶಾಸ್ತ್ರವನ್ನು ಮಾಡುತ್ತಾರೆ. ಇಂದು ದೇವಿಯ ಕೀಲಿಗೆ (ಉತ್ಸವಮೂರ್ತಿ) ವಿಶೇಷ ಮಜ್ಜನ, ಪೂಜಾ ಕಾರ್ಯವನ್ನು ಮಾಡಲಾಗುತ್ತದೆ. ನಾಡಿಗರ ಹನುಮಂತರೆಡ್ಡಿಯವರ ಹೊಲದಲ್ಲಿ ಜಲ್ದಿಗುಂಡಿ ಎಂದು ಕರೆಯುವ ಜಾಗದಲ್ಲಿ ಇದು ನಡೆಯುತ್ತದೆ.
ನಂತರ ದೇವತೆಯು ಶನಿವಾರದವರೆಗೆ ಗ್ರಾಮದ ಹೊರವಲಯದಲ್ಲಿ ಕಣಿವೆಯಲ್ಲಿರುವ ದೇವಾಲಯಕ್ಕೆ ಹೋಗುತ್ತದೆ. ಕಣಿವೆ ಮಾರಮ್ಮ ಧರ್ಮಸಮನ್ವಯದ ದೇವತೆ ಎನಿಸುತ್ತದೆ. ಪೂಜೆಯನ್ನು ನಾಯಕ, ಗೊಲ್ಲ ಸಮುದಾಯದವರು ಮಾಡುತ್ತಾರೆ. ಸಿಡಿ ಉತ್ಸವು ಹರಿಜನಾಂಗದ ಮಹಿಳೆ ವಿನೋದಮ್ಮ ಮೊದಲ ಸಿಡಿ ಆಡಿದ ನಂತರವೇ ಪ್ರಾರಂಭವಾಗುತ್ತದೆ. ಹೊರವಲಯದಲ್ಲಿರುವ ಮಾರಮ್ಮನ ಗುಡಿಯನ್ನು ಕುರುಬ ಜನಾಂಗದ ಬಳ್ಳಾರಿ ಸಿದ್ದಮ್ಮ, ಹೊನ್ನರಪ್ಪನವರು ನಿರ್ಮಿಸಿದ್ದಾರೆ.
ಗುರುವಾರ ಬೇವಿನ ಸೀರೆಯ ಕಾರ್ಯಕ್ರಮ ನಡೆಯುತ್ತದೆ. ಶುಕ್ರವಾರ ದೇವಿಯ ಸಿಡಿ ಉತ್ಸಾಹ ನಡೆಯುತ್ತದೆ. ಅಂದು ಅಪಾರ ಜನಸಂದಣಿಸಿರುತ್ತದೆ. ಜಾತ್ರೆ ಸಂದರ್ಭದಲ್ಲಿ ಮೂಲ ಸೌಕರ್ಯಗಳನ್ನು ಜನರಿಗೆ ಜಿಲ್ಲಾಡಳಿ ಒದಗಿಸಬೇಕೆಂದು ಡಾ.ಕಣುಮೇಶ್ ರವರು ಅಭಿಪ್ರಾಯ ಪಡುತ್ತಾರೆ. ಶನಿವಾರ ಗಾವು ಕಾರ್ಯಕ್ರಮ ನಡೆಯುತ್ತಿತ್ತು ಪೋತರಾಜರು ಗಾವಿನ ಮರಿಯನ್ನು ಜಿಗಿಯುತ್ತಿದ್ದರು, ಇತ್ತೀಚಿಗೆ ಸಾಂಕೇತಿಕ ಶಾಸ್ತ್ರಗಳು ಮಾತ್ರ ನಡೆಯುತ್ತವೆ. ನಂತರ ದೇವತೆಯು ಗ್ರಾಮಕ್ಕೆ ಹಿಂದಿರುತ್ತದೆ. ಭಾನುವಾರದಂದು ಭೂತನ ಎಡೆ, ದೇವಿಗುಡಿ ದುಂಬುವ ಕಾರ್ಯ ನಡೆಯುತ್ತದೆ. ದೇವಿಯ ಜಾತ್ರೆಗೆ ವಿದ್ಯುಕ್ತವಾಗಿ ತೆರೆಬೀಳುತ್ತದೆ.
ಬಯಲು ಸೀಮೆಗಳ ಜಾತ್ರೆಗಳಲ್ಲಿ ಬಹುವಿಶೇಷತೆಯನ್ನು ಕಣಿವೆ ಮಾರಮ್ಮ ಜಾತ್ರೆ ಪಡೆದುಕೊಂಡಿದೆ. ಜಾತ್ರೆಯ ಸಂದರ್ಭದಲ್ಲಿ ಟ್ರಾಫಿಕ್ ಹಾಗೂ ಧೂಳು ನಿಯಂತ್ರಣಕ್ಕೆ ವಿಶೇಷ ಗಮನವನ್ನು ಹರಿಸಬೇಕೆಂದು ಲೋಕೇಶ್.ಹೆಚ್.ಎನ್, ಲಕ್ಷ್ಮೀಕಾಂತ್ ಆಗ್ರಹಿಸಿರುವುದರಲ್ಲಿ ಅರ್ಥವಿದೆ.
ಲೇಖನ-ಡಾ.ಮಹೇಶ್.ಕೆ, ಉಪನ್ಯಾಸಕರು, ಸ.ಪ.ಪೂ.ಕಾಲೇಜು, ಚಿಕ್ಕಗೊಂಡನಹಳ್ಳಿ.

