ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕುರ್ಚಿ ಕಿತ್ತಾಟ, ಭ್ರಷ್ಟಾಚಾರಗಳಲ್ಲಿ ಮುಳುಗಿ ಹೋಗಿದ್ದು, ಆಡಳಿತ ನಿರ್ವಹಣೆಯೂ ತನ್ನ ಜವಾಬ್ದಾರಿ ಎನ್ನುವುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಳೆಯಿಂದ ಒಪಿಡಿ ಸೇವೆ ಬಂದ್ ಆಗುವ ಆತಂಕ ಎದುರಾಗಿದ್ದು, ಸರ್ಕಾರ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಟೀಕಾಪ್ರಹಾರ ಮಾಡಿದ್ದಾರೆ.
ಭಾರತದಲ್ಲಿ ಈಗಾಗಲೇ ವೈದ್ಯರ ಕೊರತೆಯಿದೆ. ವೈದ್ಯರ ಬೇಡಿಕೆಗಳು ನ್ಯಾಯಯುತವಾಗಿದ್ದು, ಔಷಧ ಪೂರೈಕೆ, ವರ್ಗಾವಣೆ ನೀತಿ, ಹುದ್ದೆಗಳ ಭರ್ತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ವೈದ್ಯರ ಸಂಘ ಸಂಧಾನಕ್ಕೆ ಸಿದ್ಧವಿದ್ದರೂ, ಅದಕ್ಕೆ ಮುಂದಾಗದಿರುವುದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಿದೆ. ಸರ್ಕಾರಕ್ಕೆ ಇದು ಆದ್ಯತೆಯ ವಿಚಾರವೇ ಅಲ್ಲ. ಸರ್ಕಾರ 10 ತಿಂಗಳಿಂದ ಹಣ ಪಾವತಿ ಬಾಕಿ ಉಳಿಸಿದ ಪರಿಣಾಮವಾಗಿ ಎಂಆರ್‌ಐ, ಡಯಾಲಿಸಿಸ್ ಸೇವೆಗಳೂ ಸ್ಥಗಿತಗೊಂಡು, ಜನಸಾಮಾನ್ಯರು ನರಳುವಂತಾಗಿದೆ ಎಂದು ರವಿ ಅವರು ಟೀಕಿಸಿದರು.
ಒಂದು ವೇಳೆ ತುರ್ತು ಸೇವೆಯೂ ಸ್ಥಗಿತಗೊಂಡರೆ, ಆಗ ಜನರಿಗೆ ಉಂಟಾಗುವ ಸಮಸ್ಯೆಗೆ ಜವಾಬ್ದಾರಿ ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ವೈದ್ಯರ ಸಂಘದೊಡನೆ ಸಮಾಲೋಚನೆ ನಡೆಸಿ, ವೈದ್ಯರ ನ್ಯಾಯಯುತ ಬೇಡಿಕೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಈಗಾಗಲೇ ಜನವಿರೋಧಿ ಎನಿಸಿಕೊಂಡಿರುವ ಸರ್ಕಾರ ಜನರ ಪ್ರಾಣದೊಡನೆ ಆಟವಾಡುವ ಸರ್ಕಾರ ಎನಿಸಿಕೊಳ್ಳಲಿದೆ ಎಂದು ರವಿ ಅವರು ಎಚ್ಚರಿಸಿದ್ದಾರೆ.

