ಚಂದ್ರವಳ್ಳಿ ನ್ಯೂಸ್, ತಿಪಟೂರು:
ಹೆಣ್ಣಿನಲ್ಲಿನ ಭಯವನ್ನು ಅವಳಿಗೆ ಬಳುವಳಿಯಾಗಿ ಕೊಡುತ್ತ ಬಂದಿರುವುದು ಹೆಣ್ಣೇ ಹೊರತು, ಗಂಡಲ್ಲ. ಮಹಿಳೆಯರು ತಮ್ಮಲ್ಲಿನ ದ್ವಂದ್ವ ಮತ್ತು ಭಯ ಬಿಟ್ಟು ಆತ್ಮವಿಶ್ವಾಸದಿಂದ ತಮ್ಮ ಗುರಿಯತ್ತ ಮುನ್ನಡೆಯಬೇಕು. ಭಯವನ್ನು ಮೆಟ್ಟಿನಿಂತು ಸಮುದ್ರವಾಗಬೇಕು ಎಂದು ರಾಜ್ಯ ಮಾಹಿತಿ ಆಯುಕ್ತೆ ಡಾ. ಮಮತಾ ಬಿ.ಆರ್. ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸೆಮಿನಾರ್ ಹಾಲ್ ನಲ್ಲಿ ಬುಧವಾರ ಮಹಿಳಾ ಸಬಲೀಕರಣ ಕೋಶ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ, ಪಾಕ್, ಯುಕೆ, ಸ್ವೀಡನ್, ಸ್ವಿಜರ್ಲ್ಯಾಂಡ್ ದೇಶಗಳಲ್ಲಿನ ಹೆಣ್ಣಿನ ಸ್ಥಿತಿ ಗತಿ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ, ಸಬಲೀಕರಣವೆಂದರೆ, ಗಂಡಿಗಿಂತ ತಾನು ಶ್ರೇಷ್ಠಳು ಎಂದು ತೋರಿಸಿಕೊಳ್ಳುವ ಅಧಿಕಾರವಲ್ಲ, ಸಬಲೀಕರಣವೆಂದರೆ ನಮ್ಮ ಅಡೆತಡೆಗಳನ್ನು ಮೀರಿ ಸಮಾಜಕ್ಕೆ ಹೆಚ್ಚಾಗಿ ಒಳ್ಳೆಯದನ್ನು ನೀಡುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಶಶಿಕುಮಾರ್ ಎಚ್. ಸಿ ಮಾತನಾಡಿ, ಮಹಿಳೆಯರಿಗೆ ಮೊದಲಿಗಿಂತ ಇಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳಿದ್ದು, ಅವರು ಅಡಿಗೆ ಮನೆ, ಸಂಸಾರ ಎಂಬೆಲ್ಲ ಕಟ್ಟುಪಾಡುಗಳಿಂದ ಹೊರಬಂದು ತಮ್ಮ ಗುರಿ ಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದರು.

ಐಕ್ಯೂಎಸಿ ಸಂಯೋಜಕ ಡಾ. ಯೋಗೀಶ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ರೇಣುಕಾ.ಆರ್, ಐಕ್ಯೂಎಸಿ ಸಹ ಸಂಯೋಜಕ ಡಾ. ಸೈಯದ್ ಇಬ್ರಾಹಿಂ, ಕನ್ನಡ ವಿಭಾಗದ ಮುಖ್ಯಸ್ಥೆ ಸ್ಮಿತಾ, ಪ್ರಾಧ್ಯಾಪಕಿಯರಾದ ಸುಭದ್ರಮ್ಮ, ಅರಣಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

