ಭಾರತೀಯ ಕಿಸಾನ್ ಸಂಘವು ರಾಜಕೀಯ ಮತ್ತು ಭ್ರಷ್ಟಾಚಾರ ರಹಿತ ಏಕೈಕ ರೈತ ಸಂಘಟನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಕಿಸಾನ್ ಸಂಘದಿಂದ ದೊಡ್ಡಘಟ್ಟ ಗ್ರಾಮ ಘಟಕದ ಗ್ರಾಮ ಸಮಿತಿ ಅಧ್ಯಕ್ಷರಾಗಿ ಗುರುಮೂರ್ತಿ ಆಯ್ಕೆ ಆಗಿದ್ದಾರೆ.

ಭಾರತೀಯ ಕಿಸಾನ್ ಸಂಘದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಘಟಕದ ವತಿಯಿಂದ ದೊಡ್ಡಗಟ್ಟ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ರಾಮ ಸಮಿತಿ ಹಾಗೂ ನಾಮಫಲಕ ಉದ್ಘಾಟನಾ ಕಾರ್ಯಕ್ರಮವನ್ನು ಗೋಪೂಜೆ ಮಾಡುವುದರ ಮುಖಾಂತರ ನೆರವೇರಿಸಲಾಯಿತು.
ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಗುರುಮೂರ್ತಿ, ಉಪಾಧ್ಯಕ್ಷರಾಗಿ ರವೀಂದ್ರ. ಕಾರ್ಯದರ್ಶಿ ರುದ್ರಸ್ವಾಮಿ ಆಯ್ಕೆಯಾದರು.

- Advertisement - 

ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕರಿಯಮ್ಮ, ಕಾರ್ಯದರ್ಶಿ ಕಮಲಮ್ಮ ಇವರುಗಳನ್ನು ಆಯ್ಕೆ ಮಾಡಲಾಯಿತು. ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಜೀವರು ಮಾತನಾಡಿ ಭಾರತೀಯ ಕಿಸಾನ್ ಸಂಘವು ಗ್ರಾಮಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಇರುವಂತಹ ಯಾವುದೇ ರಾಜಕೀಯ ರಹಿತ ಭ್ರಷ್ಟಾಚಾರ ರಹಿತ ಏಕೈಕ ರೈತ ಸಂಘಟನೆ ಇದಾಗಿದೆ ಈ ಸಂಘಟನೆಯು ಯಾವುದೇ ವ್ಯಕ್ತಿಗತ ಸಂಘಟನೆ ಯಾಗದೆ ಸಂಘಟನಾತ್ಮಕವಾಗಿ ಕೆಲಸ ಮಾಡಿಕೊಂಡು ರೈತರಿಗೆ ಸ್ವಾವಲಂಬಿಯಾಗಿ ಬದುಕುವ ರೀತಿ ನೀತಿಗಳನ್ನು  ಹಾಗೂ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಯಾವ ರೀತಿ ಪಡೆಯಬೇಕು ಎಂಬುವುದರ ಬಗ್ಗೆ ರೈತರಿಗೆ ಹಲವು ರೀತಿಯ  ಪ್ರಶಿಕ್ಷಣಗಳನ್ನು ಕೊಡುವ ಮುಖಾಂತರ ರೈತನನ್ನು  ಸ್ವಾವಲಂಬಿಯಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಮಾತನಾಡಿ ಭಾರತೀಯ ಕಿಸಾನ್ ಸಂಘವು ಗ್ರಾಮ ಸಮಿತಿಯಿಂದ ಮಾಡಬೇಕಾದ ಕೆಲಸ ಕಾರ್ಯಗಳನ್ನು ಯಾವ ರೀತಿ ಮಾಡಬೇಕು ಎಂಬುದರ ವಿಷಯಗಳನ್ನು ಮಂಡಿಸಿದರು.

ಅದರಲ್ಲಿ ಗ್ರಾಮಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಗೋಗಟ್ಟೆ, ಕೆರೆ, ಶೌಚಾಲಯ, ಶಾಲಾ ಕಟ್ಟಡ, ಪಶು ವೈದ್ಯಕೀಯ ಚಿಕಿತ್ಸೆ ಕುಡಿಯುವ ನೀರು, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಕ್ರಮಗಳ ಬಗ್ಗೆ ನಾವು ಯಾವ ರೀತಿ ಇವುಗಳನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿದರು. ಜಿಲ್ಲಾ ಗೌರವಾಧ್ಯಕ್ಷ ರಮೇಶ್ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ರೈತ ಸಂಘಟನೆಯ 547 ದಿನದ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಫಲಪ್ರದವಾಗಿದೆ. ಈ ಯೋಜನೆಯು ರಾಜಕೀಯ ಹಿತಾಸಕ್ತಿಯ ಧೋರಣೆಯಿಂದ ಕುಂಟುತ್ತ ಸಾಗಿದೆ ಈ ಯೋಜನೆಯ ಸದುಪಯೋಗವನ್ನು ತಾಲ್ಲೂಕಿನ ಎಲ್ಲಾ ಭಾಗಗಳಿಗೆ ತೆಗೆದುಕೊಂಡು ಹೋಗಬೇಕಾದರೆ ಹೋರಾಟ ಅನಿವಾರ್ಯವಾಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಗ್ರಾಮ ಸಮಿತಿಗಳ ಸಹಾಯ ಹೆಚ್ಚಾಗಿ ಬೇಕಾಗುತ್ತದೆ. ಹಾಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಈ ರೀತಿಯ ಗ್ರಾಮ ಸಮಿತಿಗಳು ಉದ್ಘಾಟನೆಯಾಗಬೇಕು ಎಂದು ನೀರಾವರಿ ವಿಚಾರದ ಬಗ್ಗೆ ವಿಶ್ಲೇಷಿಸಿದರು.

- Advertisement - 

ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ ಮಾತನಾಡಿ ಯಾವುದೇ ಇಲಾಖೆಯಲ್ಲಿ ಕೆಲಸವಾಗಬೇಕಾದರೆ ರೈತರು ಸಂಘಟಿತರಾಗಬೇಕು ಇಲ್ಲವಾದಲ್ಲಿ ಸರ್ಕಾರಿ ಕಚೇರಿಗಳ ಕೆಲಸವನ್ನು ಮಾಡಿಸಿಕೊಳ್ಳಬೇಕಾದರೆ ದಿನಗಟ್ಟಲೆ ಅಲೆದು ಅವರು ಕೇಳಿದಷ್ಟು ಹಣವನ್ನು ಕೊಟ್ಟು ನಾವು ಅವರ ಜೇಬನ್ನು ತುಂಬಿಸಿ ನಮ್ಮ ಕೆಲಸ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ರೈತರು ಸಂಘಟರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ಮಾತನಾಡಿ ಬೆಸ್ಕಾಂ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ತಿಳಿಸಿದರು. ಕೆಇಆರ್ ಸಿ ಆದೇಶದ ಪ್ರಕಾರ ಪರಿವರ್ತಕಗಳು ಸುಟ್ಟ 72 ಗಂಟೆ ಒಳಗಾಗಿ ಸರಿಪಡಿಸಿ ರೈತರಿಗೆ ತಾವೇ ಸ್ವಂತ ವಾಹನದಲ್ಲಿ ತಂದು ಸ್ಥಾಪಿಸಬೇಕು. ಇಲ್ಲದಿದ್ದರೆ ನಿಯಮದ ಪ್ರಕಾರ ರೈತರ ಬೆಳೆ ಹಾನಿಯಾಗಿದ್ದಲ್ಲಿ ಪರಿಹಾರವಾಗಿ ದಿನವೊಂದಕ್ಕೆ ಅಧಿಕಾರಿಯ ಸಂಬಳದಲ್ಲಿ ಪರಿಹಾರ ಕೊಡಬೇಕಾಗುತ್ತದೆ. ರೈತರು ಗೊತ್ತಿಲ್ಲದೆ ಇಲಾಖೆಯ ಹತ್ತಿರ ಅಲೆದು ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನದಲ್ಲಿ ಈ ರೀತಿ ಆಗಬಾರದು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ಮಾತನಾಡಿ ರೈತರು ಶ್ರಮಜೀವಿಗಳಾಗಿದ್ದಾರೆ. ಹಗಲು ರಾತ್ರಿ ಎನ್ನದೆ ದುಡಿದು ದೇಶಕ್ಕೆ ಅನ್ನ ಕೊಡುತ್ತಿದ್ದಾನೆ ಆದರೆ ಅದೇ ಅನ್ನದಾತನಿಗೆ ಪ್ರತಿ ವರ್ಷ ಕೈಕೊಡುತ್ತಿರುವ ಮಳೆ ಪ್ರಕೃತಿ ವಿಕೋಪ ರೈತನ ಬೆಳೆಗೆ ರೋಗಭಾದೆ ಹಾಗೂ ಬೆಲೆಯ ಏರಿಳಿತಗಳಿಂದ ಬೆಳೆದ ಬೆಳೆಯು ಕೈಗೆ ಸಿಗದೇ ರೈತನು ಬೇರೆ ದಾರಿ ಇಲ್ಲವೇ ಆತ್ಮಹತ್ಯೆ ಯಂತಹ ದುಸ್ಸಾಹಸಕ್ಕೆ ಕೈಹಾಕುವ ಪ್ರಸಂಗವು ಬಂದೊದಗುತ್ತದೆ. ಆದ್ದರಿಂದ ರೈತ ಬೆಳೆದ ಬೆಳೆಗೆ ಲಾಭದಾಯಕ ಬೆಲೆ ಘೋಷಣೆಯಾಗಬೇಕು. ಈ ಎಲ್ಲಾ ಸಮಸ್ಯೆಗಳು ಈಡೇರಬೇಕಾದರೆ ಹೋರಾಟ ಅನಿವಾರ್ಯ ವಾಗುತ್ತದೆ ರೈತ ಒಗ್ಗಟ್ಟಾಗಲೇಬೇಕು ಎಂದು ತಿಳಿಸಿದರು.

ತಾಲ್ಲೂಕು ಕಾರ್ಯದರ್ಶಿ ಚಂದ್ರಗಿರಿ ನಿರೂಪಿಸಿದರು. ಜಿಲ್ಲಾ ಕೋಶಾಧ್ಯಕ್ಷ ಚಿಕ್ಕೇ ಗೌಡ್ರು ವಂದಿಸಿದರು. ಜಿಲ್ಲಾ ಮಹಿಳಾ ಪ್ರಮುಖ್ ರಮ್ಯಾ, ಜಿಲ್ಲಾ ಪದಾಧಿಕಾರಿಗಳಾದ ಪುಟ್ಟರಾಜು ಹೊಸದುರ್ಗ, ಕುಮಾರ್ ದೊಡ್ಡಘಟ್ಟ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಗಡಾರಿಕೃಷ್ಣಪ್ಪ, ಉಪಾಧ್ಯಕ್ಷ ರಂಗನಾಥ್ ಗೌಡ, ತಾಲೂಕ್ ಕಾರ್ಯಕಾರಿಗಳಾದ ತಿಪ್ಪೇಶ್ ಪರಮೇನಹಳ್ಳಿ, ಜಯಣ್ಣ ಮೇಟಿಕುರ್ಕೆ, ನೂತನ ಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ ಹಾಗೂ ಮಹಿಳಾ ಅಧ್ಯಕ್ಷೆ ಕರಿಯಮ್ಮ ವೇದಿಕೆ ಉಪಸ್ಥಿತರಿದ್ದರು. ತಾಲ್ಲೂಕು ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

Share This Article
error: Content is protected !!
";