ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿರುವ, ಈ ಬಾರಿ 4.48 ಲಕ್ಷ ಕೋಟಿ ರೂ ಗಾತ್ರದ ‘ಅತಿ ದೊಡ್ಡ ಬಜೆಟ್‘ ಮಂಡಿಸಿ, ‘ರಾಜ್ಯದ ಆರ್ಥಿಕತೆ ಸದೃಢವಾಗಿದೆ‘ ಎನ್ನುವ ಮರೀಚಿಕೆಯಲ್ಲಿ ವಿಹರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಬಜೆಟ್ ಪುಸ್ತಕದಲ್ಲಿ ನೀವು ಬರೆದುಕೊಂಡ ಅಂಕಿ-ಸಂಖ್ಯೆಗಳ ಆಚೆಗೆ, ವಾಸ್ತವ ಜಗತ್ತಿನ ಕಟುಸತ್ಯವನ್ನು ಈ ಮಾಧ್ಯಮ ವರದಿಯೇ ಬಯಲು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೂರಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಯುವ ಪೊಲೀಸ್ ಸಿಬ್ಬಂದಿಗಳಿಗೆ ಹಿಂದಿನ ತಿಂಗಳ ವೇತನ ನೀಡಲು ನಿಮ್ಮ ಕರ್ನಾಟಕ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ನಿಮ್ಮ ಬಜೆಟ್ ಎಷ್ಟು ಅವಾಸ್ತವಿಕವಾಗಿದೆ ಎಂದು ಬೇರೆ ಹೇಳಬೇಕೇ? ಪೊಲೀಸ್ ಸಿಬ್ಬಂದಿಗಳಿಗೆ ವೇತನ ನೀಡಲು ನಿಮ್ಮ ಸರ್ಕಾರದ ಬಳಿ ಹಣವಿಲ್ಲ, ಆದರೂ ನಿಮ್ಮ ಒಣ ಪ್ರತಿಷ್ಠೆಯ ಮಾತುಗಳಿಗೆ ಬರವಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ ಮುಖ್ಯಮಂತ್ರಿಗಳೇ? ಎಂದು ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ವಿಜಯನಗರ, ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ, ಸಾವಿರಾರು ಪೊಲೀಸರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ.
ಸುಳ್ಳು ಪ್ರಚಾರಕ್ಕೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಹಗಲಿರುಳು ಶ್ರಮಿಸುವ ನಮ್ಮ ರಕ್ಷಕರಿಗೆ ವೇತನ ನೀಡಲು ಹಣವಿಲ್ಲ! ಇದು ಕೇವಲ ತಾಂತ್ರಿಕ ವಿಳಂಬವಲ್ಲ, ರಾಜ್ಯದ ಆರ್ಥಿಕ ದಿವಾಳಿತನದ ಮತ್ತೊಂದು ಸಾಕ್ಷಿ! ಒಂದು ಕಡೆ ದಾಖಲೆ ಮೊತ್ತದ ಬಜೆಟ್ ಘೋಷಣೆ, ಮತ್ತೊಂದು ಕಡೆ ಸಂಬಳಕ್ಕಾಗಿ ಪೊಲೀಸರ ಪರದಾಟ – ಈ ವೈರುಧ್ಯವೇ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ‘.
ಬಜೆಟ್ ನಲ್ಲಿ ಅಂಕಿ-ಅಂಶಗಳ ಮೂಲಕ ಜನರನ್ನು ಮರಳು ಮಾಡುವ ನಿಮ್ಮ ಅನಗತ್ಯ, ಅವಾಸ್ತವಿಕ ಸರ್ಕಸ್ ಬಯಲಾಗಿದೆ ಮುಖ್ಯಮಂತ್ರಿಗಳೇ! ಲಕ್ಷ ಕೋಟಿಗಳ ಪ್ರಚಾರದ ಅಬ್ಬರದಲ್ಲಿ ನಮ್ಮ ಆರಕ್ಷಕ ಸಿಬ್ಬಂದಿಗಳ ವೇತನ ನೀಡಲಾಗದಿರುವುದು ನಿಮ್ಮ ಸಾಮಾಜಿಕ ನ್ಯಾಯವೇ? ಕಾಗದದ ಮೇಲಿನ ಘೋಷಿತ ಅಂಕಿ-ಅಂಶಗಳಿಗಿಂತ,
ಜನರ ಸ್ವಾಭಿಮಾನದ ಬದುಕು ಮುಖ್ಯ. ನಿಮ್ಮ ವೈಫಲ್ಯಗಳಿಗೆ ಕಾರಣ ಏನೇ ಇರಲಿ, ಈ ಕೂಡಲೇ ರಾಜ್ಯದ ಪೊಲೀಸ್ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡಿ ಎಂದು ಆಗ್ರಹಪೂರ್ವಕವಾಗಿ ವಿಜಯೇಂದ್ರ ಒತ್ತಾಯಿಸಿದ್ದಾರೆ.

