ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ರಾಜ್ಯ ಶಿಕ್ಷಣ ಪರೀಕ್ಷಾ ಪದ್ಧತಿಯಲ್ಲಿ ಹಿಂದಿ ಭಾಷಾ ಕಲಿಕೆಯನ್ನು ಬಲವಂತವಾಗಿ ರಾಜ್ಯ ಸರ್ಕಾರ ಹೇರಿರುವುದನ್ನು ವಿರೋಧಿಸಿ ತಾಲೂಕಿನ ಕನ್ನಡ ಪರ, ದಲಿತ ಪರ, ರೈತ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ರಾಜ್ಯ ಶಿಕ್ಷಣ ಪರೀಕ್ಷಾ ಪದ್ಧತಿಯಲ್ಲಿ ಹಿಂದಿ ಭಾಷಾ ಕಲಿಕೆಯನ್ನು ಬಲವಂತವಾಗಿ ರಾಜ್ಯ ಸರ್ಕಾರ ಹೇರಿರುವುದನ್ನು ವಿರೋಧಿಸಿ ತಾಲೂಕಿನ ಕನ್ನಡ ಪರ, ದಲಿತ ಪರ, ರೈತ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಹೋರಾಟ ಗಾರರು ಮಾತನಾಡಿ ನಮಗೆ ತ್ರಿಭಾಷಾ ಸೂತ್ರದ ಅಗತ್ಯವಿಲ್ಲ, ರಾಜ್ಯ ಸರ್ಕಾರ ಕೇಂದ್ರದ ತಾಳಕ್ಕೆ ಕುಣಿದರೆ ಇದೇ ಏಪ್ರಿಲ್ 30 ರಂದು ನಡೆಯುವ ಹಿಂದಿ ಪರೀಕ್ಷಾ ಕೇಂದ್ರಗಳಿಗೆ ನುಗ್ಗಿ ಅಡ್ಡಿಪಡಿಸಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
ರಾಜ್ಯ ಶಿಕ್ಷಣ ಪರೀಕ್ಷಾ ಪದ್ಧತಿಯೊಳಗೆ ಹಿಂದಿ ಭಾಷೆಯ ಕಲಿಕೆಯನ್ನು ಬಲವಂತವಾಗಿ ಹೇರುತ್ತಾ ಬರಲಾಗುತ್ತಿದ್ದು, ಇದೀಗ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿ-ಯುವಜನರ ಶೈಕ್ಷಣಿಕ ಮುನ್ನಡೆಗೆ ತೊಡಕಾಗುವ ಹಂತ ತಲುಪಿದೆ. 2025ನೇ ಸಾಲಿನ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ 1.42 ಲಕ್ಷ ವಿದ್ಯಾರ್ಥಿಗಳನ್ನು ಹಿಂದಿ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವ ಮೂಲಕ ರಾಜ್ಯ ಸರಕಾರ, ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರುವ ಕೇಂದ್ರದ ಒಕ್ಕೂಟ ಸರಕಾರದ ಭಾಷಾ ದೌರ್ಜನ್ಯ ನೀತಿಗೆ ಕೈಜೋಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಯಾವುದೇ ಹಂತದ ಶಿಕ್ಷಣ ಪಠ್ಯಕ್ರಮದಲ್ಲೂ ಕೂಡ ಹಿಂದಿ ಭಾಷೆಯು ರಾಷ್ಟ್ರ ಭಾಷೆ’ ಎಂದು ಬಿಂಬಿಸುವ ಕಲ್ಪಿತ ವಿಷಯವನ್ನು ತೆಗೆದು ಹಾಕಬೇಕು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ವಿತೌಟ್ ಹಿಂದಿ ಎಂಬ ನಿಯಮವನ್ನು ಪ್ರಕಟಿಸದಿದ್ದರೆ, ಕನ್ನಡಪರ ಸಂಘಟನೆಗಳು, ದಲಿತ, ರೈತ, ವಿದ್ಯಾರ್ಥಿ ಸಂಘಟನೆಗಳು ಮಾ.30ರಂದು ಹಿಂದಿ ಭಾಷಾ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಿಗೆ ಕನ್ನಡ ಕಾರ್ಯಕರ್ತರು ನುಗ್ಗಲಿದ್ದಾರೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಒತ್ತಾಯಗಳು:
ಕರ್ನಾಟಕದ ರಾಜ್ಯ ಶಿಕ್ಷಣ ಪರೀಕ್ಷಾ ಪದ್ದತಿಯೊಳಗೆ ಹಿಂದಿ ಭಾಷಾ ಕಲಿಕೆಯನ್ನು ಹಂತಹಂತವಾಗಿ, ಬಲವಂತವಾಗಿ ಹೇರುತ್ತಾ ಬರಲಾಗುತ್ತಿದ್ದು ಅದೀಗ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿ-ಯುವಜನರ ಶೈಕ್ಷಣಿಕ ಮುನ್ನಡೆಗೆ ತೊಡಕಾಗುವ ಹಂತ ತಲುಪಿದೆ.
1. ಎರಡು ನುಡಿ ಕಲಿಕಾ ಪದ್ದತಿಯನ್ನು ಜಾರಿಗೊಳಿಸಬೇಕು. ಥೋರಟ್ ಆಯೋಗದ ವರದಿಯನ್ನು ಶಾಸನಸಭೆಯಲ್ಲಿ ಹಾಗೂ ಸಾರ್ವಜನಿಕ ಚರ್ಚೆಗೆ ಒದಗಿಸಬೇಕು. ದ್ವಿಭಾಷಾ ನೀತಿ ಜಾರಿಯಾಗುವವರೆಗೆ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯಗೊಳಿಸದಂತೆ (pass without Hindi ಕರ್ನಾಟಕ ಸರ್ಕಾರವು ಆದೇಶ ಹೊರಡಿಸಬೇಕು.
2. ಈ ಹಿಂದಿನ ಸಾಲಿನ ಪರೀಕ್ಷೆಗಳಲ್ಲಿ ಹಿಂದಿ ಭಾಷೆಯಲ್ಲಿ ನಪಾಸಾದ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣರೆಂದು ಘೋಷಿಸಿ ಅವರ ಶೈಕ್ಷಣಿಕ ಮುನ್ನಡೆಗೆ ಅವಕಾಶ ನೀಡಬೇಕು.
3. ಹಿಂದಿ ಭಾಷಾ ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಬೇಕು ಮತ್ತು ಈಗಾಗಲೆ ನೇಮಕಗೊಂಡಿರುವ ಶಿಕ್ಷಕರನ್ನು ಕನ್ನಡ ಭಾಷಾ ಶಿಕ್ಷಕರಾಗಿ ನಿಯೋಜಿಸಲು ಕ್ರಮವಹಿಸಿ ಅದಕ್ಕೆ ಸೂಕ್ತ ಶೈಕ್ಷಣಿಕ ಅರ್ಹತೆ ಪಡೆಯಲು ನಿಯಮಗಳನ್ನು ರೂಪಿಸಬೇಕು.
4. ಕರ್ನಾಟಕ ರಾಜ್ಯದ ಯಾವುದೇ ಹಂತದ ಶಿಕ್ಷಣ ಪಠ್ಯಕ್ರಮದೊಳಗೆ’ ಹಿಂದಿ ಭಾಷೆಯು ರಾಷ್ಟ್ರ ಭಾಷೆ’ ಎಂದು ಬಿಂಬಿಸುವ ಕಲ್ಪಿತ ವಿಷಯವನ್ನು ತೆಗೆದು ಹಾಕಬೇಕು.
5. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ’ ಪಾಸ್ ವಿತೌಟ್ ಹಿಂದಿ’ ಎಂಬ ನಿಯಮವನ್ನು ಕರ್ನಾಟಕ ಸರ್ಕಾರವು ಈ ತಕ್ಷಣ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ದಿನಾಂಕ 30-3-2026 ರಂದು ಎಲ್ಲ ಕನ್ನಡಪರ-ಜನಪರ ಸಂಘಟನೆಗಳು ಸೇರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಸ್. ಎಸ್. ಎಲ್. ಸಿ. ಪರೀಕ್ಷಾ ಮಂಡಳಿ’ ಮುತ್ತಿಗೆ ಹಾಕಲಾಗುವುದು.
ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಸದಸ್ಯ ಜಿ.ಸತ್ಯನಾರಾಯಣ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಪರಮೇಶ್ ವೆಂಕಟಪ್ಪ, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಅಂಜನೇಯ, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ತಾಲ್ಲೂಕು ಅಧ್ಯಕ್ಷ ಹಮಾಮ್ ಎಸ್.ವೆಂಕಟೇಶ್, ಶಿವಕುಮಾರ್, ರಾಜ್ಯ ರೈತ ಸಂಘದ ಮುಖಂಡರಾದ ಪ್ರಸನ್ನ, ಮುತ್ತೇಗೌಡ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ರಮೇಶ್, ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್, ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

