ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿ.ಎಂ.-ಕಿಸಾನ್) ಅಡಿಯಲ್ಲಿ 22ನೇ ಕಂತಿನ ಆರ್ಥಿಕ ನೆರವು ವರ್ಗಾವಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಮಂತ್ರಿಗಳು ಮಾರ್ಚ್ 13 ರಂದು ಸಂಜೆ 5.00 ಗಂಟೆಗೆ ಅಸ್ಸಾಂ ರಾಜ್ಯದ ಗುವಾಹಟಿಯ ಖಾನಾಪುರದಲ್ಲಿರುವ ಜ್ಯೋತಿ-ಬಿಮ್ಮು ಅಂತರರಾಷ್ಟ್ರೀಯ ಸಾಂಸ್ಕøತಿಕ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ. ಈ ದಿನವನ್ನು ದೇಶಾದ್ಯಂತ “ಪಿ.ಎಂ. ಕಿಸಾನ್ ಉತ್ಸವ್ ದಿವಸ್” ಎಂದು ಆಚರಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಸಾಗುವಳಿ ಭೂಮಿ ಹೊಂದಿರುವ ಮತ್ತು 01.02.2019 ರ ಒಳಗೆ ಭೂದಾಖಲೆಯಲ್ಲಿ ಹೆಸರಿರುವ ಎಲ್ಲಾ ಅರ್ಹ ರೈತ ಕುಟುಂಬಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ. ಅರ್ಹ ರೈತ ಕುಟುಂಬಕ್ಕೆ ಕೃಷಿ ಚಟುವಟಿಕೆಗಳ ನಿರ್ವಹಣೆಗಾಗಿ ವಾರ್ಷಿಕವಾಗಿ ಒಟ್ಟು ರೂ. 6,000/- ಗಳ ನೆರವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ ರೂ. 2,000/- ಗಳಂತೆ ಮೂರು ಕಂತುಗಳಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ಪ್ರಸಕ್ತ 22ನೇ ಕಂತಿನಲ್ಲಿ ಕರ್ನಾಟಕ ರಾಜ್ಯದ ಒಟ್ಟು 41,40,106 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಒಟ್ಟಾರೆ ರೂ. 828.02 ಕೋಟಿಗಳ ಆರ್ಥಿಕ ನೆರವು ನೇರ ನಗದು ವರ್ಗಾವಣೆ ಮೂಲಕ ತಲುಪಲಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಿಸಲು ಮತ್ತು ಉತ್ತಮ ಕೃಷಿ ಪರಿಕರಗಳನ್ನು ಬಳಸಲು ಈ ಧನಸಹಾಯವು ಸಹಕಾರಿಯಾಗಲಿದೆ.
ಅರ್ಹ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಬಹುದು ಎಂದು ಕೃಷಿ ಇಲಾಖೆಯ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಅಪರ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

