ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ, ಅಂತರರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ಸ್ಥಾಪಿಸಲು ಸರ್ಕಾರ ತಾಂತ್ರಿಕ ಅನುಮೋದನೆ ನೀಡಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದ ವೇಳೆ, ಪರಿಷತ್ ಸದಸ್ಯರಾದ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸುಮಾರು 141.50 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಈ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಕ್ರಾಸ್ ಬಳಿ ತೋಟಗಾರಿಕೆ ಇಲಾಖೆಯಿಂದ ಹಸ್ತಾಂತರಗೊಂಡ ಸುಮಾರು 20 ಎಕರೆ ಜಮೀನಿನಲ್ಲಿ ಈ ಮಾರುಕಟ್ಟೆ ತಲೆಎತ್ತಲಿದೆ. ನಬಾರ್ಡ್ (RIDF-31) ಯೋಜನೆಯಡಿ 20.00 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ, ಚರಂಡಿ, ನೀರು ಸರಬರಾಜು, ವಿದ್ಯುದ್ದೀಕರಣ, ಹರಾಜು ಕಟ್ಟೆ ಮತ್ತು ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ಮಾರುಕಟ್ಟೆ ಆವರಣದಲ್ಲಿ ಹೂವುಗಳ ಸಂರಕ್ಷಣೆಗಾಗಿ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಮುಂದಿನ ಹಂತದ ಕಾಮಗಾರಿಗಳಲ್ಲಿ ಇದಕ್ಕೆ ಆದ್ಯತೆ ನೀಡಲಾಗುವುದು. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಮಗಳು-2004ರ ಅನ್ವಯ, ಎಪಿಎಂಸಿ ಆವರಣದಲ್ಲಿ ಶೈತ್ಯಾಗಾರ ಸ್ಥಾಪಿಸಲು ಆಸಕ್ತಿ ಹೊಂದಿರುವ ಖಾಸಗಿ ಉದ್ಯಮಿಗಳು, ವರ್ತಕರು ಅಥವಾ ಸಂಘ ಸಂಸ್ಥೆಗಳಿಗೆ ನಿವೇಶನ ದರದಲ್ಲಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಜಾಗ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯು ಜಿಲ್ಲೆಯ ರೈತರಿಗೆ ಮತ್ತು ಹೂವು ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಟ್ಟದ ಮಾರುಕಟ್ಟೆ ಮತ್ತು ಯೋಗ್ಯ ಬೆಲೆ ಒದಗಿಸಲು ಸಹಕಾರಿಯಾಗಲಿದೆ ಎಂದರು.

