ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯಲ್ಲಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಸರಬರಾಜನ್ನು ಕಳೆದ ಮೂರು ದಿನಗಳಿಂದ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸೌಮ್ಯ ತಿಳಿಸಿದರು.
ಸಿಲಿಂಡರ್ಗಳ ಸರಬರಾಜು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೋಟೆಲ್ ಸೇರಿದಂತೆ ವಾಣಿಜ್ಯ ಬಳಕೆ ಎಲ್ಪಿಜಿ ಬಳಸುತ್ತಿರುವ ಉದ್ದಿಮೆದಾರರಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ಸೂಚಿಸಲಾಗಿದೆ. ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ ಸರಬರಾಜು ಆರಂಭವಾದ ತಕ್ಷಣ ಪುನಃ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಡೊಮೆಸ್ಟಿಕ್ ಎಲ್ಪಿಜಿ ಸಿಲಿಂಡರ್ಗಳ ಸರಬರಾಜಿನಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗಿಲ್ಲ. ಅಲ್ಲದೇ, ಎಷ್ಟು ಸಂಖ್ಯೆಗಳ ಬುಕ್ಕಿಂಗ್ ಆಗಿದೆಯೋ ಅಷ್ಟು ಸಂಖ್ಯೆಯ ಸಿಲಿಂಡರ್ಗಳು ನಮ್ಮಲ್ಲಿ ಲಭ್ಯವಿದೆ. ಆಯಿಲ್ ಕಂಪನಿಗಳ ಪ್ರತಿನಿಧಿಗಳ ಮೂಲಕ ನಾನು ಮಾಹಿತಿ ಸಂಗ್ರಹಿಸಿದ ಬಳಿಕವೇ ಮಾತನಾಡುತ್ತಿದ್ದೇನೆ. ಆಸ್ಪತ್ರೆ, ಹಾಸ್ಟೆಲ್ ಹಾಗೂ ಮನೆಗಳಿಗೆ ಸಿಲಿಂಡರ್ಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಗಮನಹರಿಸಬೇಕೆಂದು ಈಗಾಗಲೇ ಸರ್ಕಾರ ಕೂಡ ಸೂಚನೆ ನೀಡಿದೆ ಎಂದು ಅವರು ತಿಳಿಸಿದರು.
ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳನ್ನು ಹೋಟೆಲ್ ಸೇರಿದಂತೆ ವಾಣಿಜ್ಯ ಬಳಕೆ ಉದ್ದೇಶದಿಂದ ಬಳಸುತ್ತಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಅಲ್ಲದೇ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎಲ್ಲ ಗ್ಯಾಸ್ ಏಜೆನ್ಸಿಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವಾಣಿಜ್ಯ ಬಳಕೆ ಸಿಲಿಂಡರ್ ಅವಲಂಬಿಸಿದ್ದ ಹೋಟೆಲ್ಗಳು ಸಂಪೂರ್ಣವಾಗಿ ತಮ್ಮ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿವೆ. ಕಾಫಿ, ಟೀ ಮಾರಾಟ ಮಾಡಲು ಮಾತ್ರ ಕೆಲ ಹೋಟೆಲ್ಗಳು ಮುಂದಾಗಿವೆ. ಅಲ್ಲದೆ, ಕೆಲವು ಹೋಟೆಲ್ಗಳು ಹಾಗೂ ಬೀದಿಬದಿ ಕ್ಯಾಂಟೀನ್ಗಳಲ್ಲಿ ಸೌದೆ ಬಳಸಿ ಆಹಾರ ತಯಾರಿಸಲಾಗುತ್ತಿದೆ.
ಯುದ್ಧದ ಪರಿಣಾಮ ದೇಶದಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಕಮರ್ಷಿಯಲ್ ಸಿಲಿಂಡರ್ಗಳ ಕೃತಕ ಅಭಾವ ಸೃಷ್ಟಿಸುವವರು ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಉದ್ವಿಗ್ನತೆಯಿಂದಾಗಿ ದೇಶದಲ್ಲಿ ಅನಿಲ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ಯಾಸ್ ಗೋದಾಮುಗಳಿಗೆ ಹೊಯ್ಸಳ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಪಿಎಸ್ಐ ಮಟ್ಟದ ಅಧಿಕಾರಿಗಳು ಖುದ್ದು ತೆರಳಿ ನಗರದ ಎಲ್ಲಾ ಗೋದಾಮುಗಳಲ್ಲಿ ಲಭ್ಯವಿರುವ ಸಿಲಿಂಡರ್ಗಳ ಸಂಖ್ಯೆ, ಬಂದಿರುವ ಆರ್ಡರ್ಗಳು ಮತ್ತು ವಿತರಣೆಯ ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.

