ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಲಿಂಗತ್ವ, ಲೈಂಗಿಕ ಅಲ್ಪಸಂಖ್ಯಾತರು, ಮಂಗಳಮುಖಿಯರ ಬದುಕಿಗೆ ಕಳೆದಮೂರು ವರ್ಷಗಳಿಂದೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಣೆ ಮಾಡಿದ್ದ 200 ಕೋಟಿ ಏನಾಯ್ತು, ಯಾವ ಮಂಗಳಮುಖಿಯರ ಜೀವನ ಸುಧಾರಣೆಯಾಗಿದೆ ಎಂದು ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಆರುಂಧತಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಮುಖಿಯರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.
ತಂದೆ, ತಾಯಿ ಕುಟಂಬ, ಬಂಧು ಬಳಗದಿಂದ ದೂರಾಗಿ ಹೊರ ಬೀಳುವ ಮಂಗಳಮುಖಿಯರು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಪಡೆಯಲು ಬಯಸುತ್ತಾರೆ. ಆದರೂ ಇಂದಿಗೂ ಅದು ಸಾಧ್ಯವಾಗುತ್ತಿಲ್ಲ. ಎಲ್ಲ ಹಂತದಲ್ಲೂ, ಎಲ್ಲ ಸಂದರ್ಭದಲ್ಲೂ ತೀವ್ರತರ ಶೋಷಣೆಗೆ ನಾವು ಒಳಗಾಗಿದ್ದೇವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಸ್ಫೂರ್ತಿ ಮಾತನಾಡಿ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದ ಮಂಗಳಮುಖಿಯರು ವಂಚಿತರಾಗುತ್ತಿದ್ದಾರೆ. ಪೊಲೀಸ್ ಆಯ್ಕೆ ಸಂದರ್ಭದಲ್ಲಿ ದೈಹಿಕ ಪರೀಕ್ಷೆಗೆಯಲ್ಲಿ ನಾವು ಅನುತ್ತೀರ್ಣರಾಗುತ್ತೇವೆ. ಪುರುಷರ ಜೊತೆಯಲ್ಲಿ ನಮ್ಮನ್ನು ಓಡುಸುವುದರಿಂದ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಇದೇ ರೀತಿಯ ಎಲ್ಲ ಉದ್ಯೋಗಗಳಲ್ಲೂ ನಾವು ವಂಚಿತರಾಗುತ್ತಿದ್ದೇವೆ ಅಲ್ಲದೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ನಮಗೆ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಸಮರ ಸಾರಥಿ ಸೇವಾ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಮ್ಮ ಮಾತನಾಡಿ, ಮಂಗಳಮುಖಿಯರಿಗೆ ಸಮರ್ಪಕ ಆರೋಗ್ಯ ಸೇವೆಗಳನ್ನು ಒದಗಿಸಬೇಕು. 50 ವರ್ಷಗಳ ನಂತರ ನಮ್ಮ ಜೀವನ ಮೂರಾಬಟ್ಟೆ ಆಗುತ್ತದೆ. ಅಲ್ಲದೆ ತಮ್ಮದೆ ಆದ ಆರೋಗ್ಯ ಸಮಸ್ಯೆ ಕಾಡುತ್ತವೆ. ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳಿಂದಾಗಿ ನೆಮ್ಮದಿ ಜೀವನ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಗಳು ಪ್ರಸ್ತುತ ಬಜೆಟ್ ನಲ್ಲಿ ಪ್ರತಿ ತಿಂಗಳು ಮೂರು ಸಾವಿರ ಪಿಂಚಣಿ ನೀಡಲು ಆದೇಶಿಸಬೇಕು ಎಂದು ಅವರು ಬೇಡಿಕೆ ಇಟ್ಟರು.
ಮಂಗಳಮುಖಿಯರಿಗೆ ಯಾರೊಬ್ಬರೂ ಮನೆಗಳನ್ನು ಬಾಡಿಗೆ ನೀಡುವುದಿಲ್ಲ. ಬಹುತೇಕ ಜನವಸತಿ ಪ್ರದೇಶದಿಂದ ಬಹುದೂರ ಹೊರ ಪ್ರಪಂಚದಲ್ಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ. ಕಡ್ಡಾಯವಾಗಿ ಮನೆಗಳನ್ನು ನಿರ್ಮಿಸಿಕೊಡಬೇಕು. ಆಶ್ರಯ ಮತ್ತಿತರರ ಯೋಜನೆಗಳಲ್ಲಿ ನಮ್ಮ ವಂತಿಕೆ ಲಕ್ಷಕ್ಕೂ ಹೆಚ್ಚಿನ ಹಣ ಕಟ್ಟಲು ಅಧಿಕಾರಿಗಳು ಹೇಳುತ್ತಾರೆ. ಅಷ್ಟೊಂದು ದುಡ್ಡು ನಮ್ಮಲ್ಲಿ ಎಲ್ಲಿ ಬರಬೇಕು ಎಂದು ಪ್ರಶ್ನಿಸಿದ ಚಂದ್ರಮ್ಮ ಅವರು ಕೂಡಲೇ ಸರ್ಕಾರವೇ ನಮ್ಮ ವಂತಿಕೆ ಹಣವನ್ನು ತುಂಬಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಮಂಗಳಮುಖಿಯರಿಗೆ ಕಾನೂನು ರಕ್ಷಣೆಯನ್ನು ಒದಗಿಸಬೇಕು. ಸಮಾಜದಲ್ಲಿ ಮಂಗಳಮುಖಿಯರು ಸ್ವೀಕೃತಿ ಪಡೆಯಲು ಬಯಸುತ್ತಾರೆ. ಮಂಗಳಮುಖಿಯರು ಸಮಾಜದಲ್ಲಿ ತಾರತಮ್ಯ ಮತ್ತು ಅಸಮಾನತೆ ಎದುರಿಸುತ್ತಾರೆ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಇಲ್ಲ. ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಆದರೆ ಅವರಿಗೆ ಸಮರ್ಪಕ ಆರೋಗ್ಯ ಸೇವೆಗಳು ಸಿಗುವುದಿಲ್ಲ. ಕಾನೂನು ರಕ್ಷಣೆ ಸಿಗುವುದಿಲ್ಲ, ಹಿಂಸೆ ಮತ್ತು
ಶೋಷಣೆಗೆ ಒಳಗಾಗುತ್ತಾರೆ ಎಂದು ನೋವು ತೋಡಿಕೊಂಡರು. ಸಮಾನತೆ, ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಗಳು ಮತ್ತು ಕಾನೂನು ರಕ್ಷಣೆ ಒದಗಿಸಬೇಕಿದೆ. ಮಂಗಳಮುಖಿಯರ ಕಲ್ಯಾಣಕ್ಕಾಗಿ 200 ಕೋಟಿ ಮೀಸಲಿಟ್ಟು ಪ್ರತ್ಯೇಕ ನಿಗಮ ಮಂಡಲಿ ಸ್ಥಾಪಿಸುವ ಮೂಲಕ ಮಂಗಳಮುಖಿಯರ ರಕ್ಷಣೆ ಮಾಡಬೇಕು ಎಂದು ಮಂಗಳಮುಖಿ ನೂತನಾ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾನಿಯಾ, ಕಂಚನಾ ಮತ್ತಿತರರು ಇದ್ದರು.

