ಪತ್ರಿಕೋದ್ಯಮ: ಸತ್ಯದ ಹೆಸರಿನಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುವ ಕಾಲ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತ್ರಿಕೋದ್ಯಮ: ಸತ್ಯದ ಹೆಸರಿನಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುವ ಕಾಲ. ಕೆಲವು ಪತ್ರಕರ್ತರು ದಿಟ್ಟವಾಗಿಯೇ ಇರುತ್ತಾರೆ. ಅವರು ಏನು ಬರೆಯುತ್ತಾರೆ ಎಂಬುದಕ್ಕೆ ಹೊಣೆ ಹೊರುತ್ತಾರೆ, ತಮ್ಮ ಮಾತಿಗೆ ಸಾಕ್ಷಿ ಕೊಡುತ್ತಾರೆ. ಆದರೆ ಮತ್ತೊಂದು ವರ್ಗದ ಪತ್ರಕರ್ತರು ನಸುಗುನ್ನಿಗಳಾಗಿಯೇ ಇರುತ್ತಾರೆ. ಬಾಯಲ್ಲಿ ಬಸಪ್ಪಎದೆಯಲ್ಲಿ ವಿಷಪ್ಪಎನ್ನುವ ಗಾದೆಗೆ ತಕ್ಕಂತೆ ವರ್ತಿಸುತ್ತಾರೆ. ಹೊರಗೆ ನೋಡಲು ಸತ್ಯದ ಹೋರಾಟಗಾರರಂತೆ ಕಾಣುತ್ತಾರೆ, ಆದರೆ ಒಳಗೆ ನಡೆಯುವ ಆಟವೇ ಬೇರೆ.

ಇದು ಪತ್ರಿಕೋದ್ಯಮವೇ ಅಲ್ಲ. ಇದು ಒಂದು ರೀತಿಯ “shallow and shadow journalism”. ಮೇಲ್ಮೈಯಲ್ಲಿ ಪ್ರಾಮಾಣಿಕತೆ ತೋರುವಂತೆ ನಟಿಸಿ, ಒಳಗೆ ನೆರಳಿನ ಆಟ ಆಡುವ ವಿಧಾನ. ಬ್ರಹ್ಮಾಂಡ ಭ್ರಷ್ಟರ ಜೊತೆ ನಿತ್ಯ ವ್ಯವಹಾರ ಮಾಡಿಕೊಂಡು, ಜನ ಮುಂದೆ ಮಾತ್ರ ಧರ್ಮದ ಮಾತು ಹೇಳುವ ಪ್ರವೃತ್ತಿ ಇದರಲ್ಲಿ ಕಾಣಿಸುತ್ತದೆ.

- Advertisement - 

ನಾನು ಇಂತಹವರನ್ನು ಬಹು ದಿನಗಳಿಂದಲೇ  ಹತ್ತಿರದಿಂದ ಗಮನಿಸುತ್ತಾ ಬಂದಿದ್ದೇನೆ. ಇವರ ಕಾರ್ಯಪದ್ದತಿ ತುಂಬಾ ಚಾತುರ್ಯದಿಂದ ಕೂಡಿರುತ್ತದೆ. ಒಬ್ಬರನ್ನು ವಿಲನ್ಮಾಡಬೇಕು ಎಂದು ನಿರ್ಧರಿಸಿದರೆ, ಅವರು ನೇರವಾಗಿ ಬರೆಯುವುದಿಲ್ಲ. ಮೊದಲಿಗೆ ತಮ್ಮ ಸುತ್ತಲಿನ ಪುಡಾಂಗಿಗಳನ್ನು ಬಳಸಿ ಸಣ್ಣಸಣ್ಣ ಫೇಕ್ ನ್ಯೂಸ್ ಗಳನ್ನು ನಿಧಾನವಾಗಿ ಹರಡಿಸುತ್ತಾರೆ. ಅದು ಸಮಾಜದಲ್ಲಿ ಒಂದು ಮಟ್ಟಿಗೆ ಹಾನಿ ಮಾಡಿದ ನಂತರ, “ನಮಗೆ ಇದಕ್ಕೆ ಸಂಬಂಧವೇ ಇಲ್ಲಎನ್ನುವಂತೆ ದೂರ ನಿಂತು ಬಿಡುತ್ತಾರೆ.

ಅವರಲ್ಲಿ ನೇರವಂತಿಕೆ ಇಲ್ಲ, ಪ್ರಾಮಾಣಿಕತೆ ಇಲ್ಲ. ಆದರೂ ತಮ್ಮನ್ನು ಸಮಾಜದ ಜಾಗೃತಿಯ ಧ್ವನಿಯಂತೆ ಬಿಂಬಿಸಿಕೊಳ್ಳುತ್ತಾರೆ. ಯಾರಾದರೂ ತಮ್ಮ ವಿರೋಧಿಯನ್ನು ಅಕ್ಷರಗಳಲ್ಲಿ ಕೊಲ್ಲಬೇಕು, ಅವರ ಗೌರವಕ್ಕೆ ಧಕ್ಕೆಯಾಗುವಂತೆ ಮಾಡಬೇಕು ಎಂದರೆ ಇಂತಹ ಪತ್ರಕರ್ತರನ್ನುಸಂಪರ್ಕಿಸಿದರೆ ಸಾಕು ಎಂಬ ಭಾವನೆ ಸಮಾಜದಲ್ಲಿ ಹುಟ್ಟಿರುವುದು ವಿಷಾದಕರ.

- Advertisement - 

ಇವರು ಇನ್ನೊಂದು ಕೆಲಸ ಚೆನ್ನಾಗಿ ಮಾಡುತ್ತಾರೆ. ಜನರಿಗೆ ಕ್ರಾಂತಿಕಾರಿ ಬರಹಎಂದು ತೋರುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಅದನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸುತ್ತಾರೆ. ಆ ಬರಹ ವೈರಲ್ ಆಗುತ್ತದೆ, ಅವರಿಗೆ ಹೆಸರು ಬರುತ್ತದೆ. ಆದರೆ ಅದರ ಹಿಂದಿರುವ ಉದ್ದೇಶ ಯಾವಾಗಲೂ ಸಮಾಜಮುಖಿಯೇ ಎಂದು ಹೇಳಲು ಸಾಧ್ಯವಿಲ್ಲ.

ಇಂದಿನ ಸೋಷಿಯಲ್ ಮೀಡಿಯಾ ಕಾಲದಲ್ಲಿ ಯಾವುದೇ ಖಚಿತ ದಾಖಲೆ ಇಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುವುದು ತುಂಬಾ ಸುಲಭವಾಗಿದೆ. ಯಾರನ್ನಾದರೂ ಕ್ಷಣಾರ್ಧದಲ್ಲಿ ತೇಜೋವಧೆ ಮಾಡಬಹುದು. ಒಂದು ಸುಳ್ಳು ಸುದ್ದಿ ಹರಿದರೆ ಅದನ್ನು ತಿದ್ದುವುದು ಸಾವಿರ ಸತ್ಯಗಳಿಗೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಜನರನ್ನು ಗೊಂದಲಕ್ಕೆ ಬೀಳಿಸುವ ಅತ್ಯಂತ ಸುಲಭ ವಿಧಾನ. ಆದರೆ ಒಂದು ಪರಿಣಾಮಕ್ಕೆ ಅವರು ಹೇಳಿದ ಕಾರಣವೇ ನಿಜವಾಗಿರುತ್ತದೆಯೇ?.
ಅದು ಯಾರೂ ಯೋಚಿಸುವುದಿಲ್ಲ. ಪರಿಣಾಮವನ್ನು ಚೆನ್ನಾಗಿ ವಿವರಿಸಿದ್ದಾರೆ ಅಂದರೆ ಕಾರಣವೂ ಅದೇ ಇರಬೇಕು ಎಂದು ಜನರು ನಂಬುತ್ತಾರೆ. ಆದರೆ ಕಾರಣವೇ ಬೇರೆ ಇದ್ದರೆ
? ಆಗ ಅದು ನೇರವಾಗಿ ಒಬ್ಬರ ತೇಜೋವಧೆಯಲ್ಲವೇ?.

ಇತ್ತೀಚಿನ ದಿನಗಳಲ್ಲಿ ಮತ್ತೊಂದು ಪ್ರವೃತ್ತಿ ಹೆಚ್ಚಾಗಿದೆ. ಸುದ್ದಿ ವಿಡಿಯೋಗಳ ಹೆಸರಿನಲ್ಲಿ ಪತ್ರಕರ್ತರು ರಾಜಕಾರಣಿಗಳ ಹಿಂದೆ ಹೋಗಿ ಮೈಕ್ ಹಿಡಿದುಕೊಂಡು ನಿಂತು, “ಅವರು ಈಗ ಏನು ಹೇಳಿದರು?”, “ಇವರು ಅದಕ್ಕೆ ಏನು ಉತ್ತರ ಕೊಡುತ್ತಾರೆ?” ಎಂದು ಕೇಳುತ್ತಾ ಒಂದು ಹೇಳಿಕೆಯನ್ನು ಇನ್ನೊಬ್ಬರ ಬಳಿ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ.

ಒಬ್ಬ ರಾಜಕಾರಣಿ ಹೇಳಿದ ಮಾತನ್ನು ಮತ್ತೊಬ್ಬ ರಾಜಕಾರಣಿಯ ಬಳಿ ತೆಗೆದುಕೊಂಡು ಹೋಗಿ ಕೇಳುವುದು, ಅಲ್ಲಿಂದ ಬಂದ ಉತ್ತರವನ್ನು ಮತ್ತೆ ಮತ್ತೊಬ್ಬರ ಬಳಿ ಕೊಂಡೊಯ್ಯುವುದು. ಇದು ನೋಡಲು ಪತ್ರಿಕೋದ್ಯಮದ ಕೆಲಸದಂತೆ ಕಾಣಬಹುದು. ಆದರೆ ನಿಜವಾಗಿ ನೋಡಿದರೆ ಇದು ಪೋಸ್ಟ್‌ ಮನ್ ಕೆಲಸ ಮಾತ್ರ.

ಸಮಾಜಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳು ಕೇಳುವುದಕ್ಕಿಂತ, ಮುಖಕ್ಕೆ ಮೈಕ್ ಹಿಡಿದು ಕ್ಷುಲ್ಲಕ ಪ್ರಶ್ನೆಗಳನ್ನು ಕೇಳಿ ಸಣ್ಣ ಸಣ್ಣ ವಿವಾದಗಳನ್ನು ಸೃಷ್ಟಿಸುವುದು ಪತ್ರಿಕೋದ್ಯಮದ ಉದ್ದೇಶವಾಗಬಾರದು.

ಪತ್ರಿಕೋದ್ಯಮವೆಂದರೆ ಸತ್ಯದ ಅನ್ವೇಷಣೆ, ಅಧಿಕಾರದ ಮೇಲೆ ಪ್ರಶ್ನೆ ಕೇಳುವ ಧೈರ್ಯ, ಸಮಾಜದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಜವಾಬ್ದಾರಿ. ಆದರೆ ಇಂದಿನ ಕೆಲ ಮಾಧ್ಯಮಗಳಲ್ಲಿ ಅದು ಆಟ-ಹಾಡಿಕೆ, ಬುಡುಬುಡಿಕೆ, ಗದ್ದಲದ ಪ್ರದರ್ಶನ ಆಗಿಬಿಟ್ಟಿದೆ.

ಒಮ್ಮೆ ಪತ್ರಿಕೋದ್ಯಮಕ್ಕೆ ಒಂದು ಗೌರವವಿತ್ತು. ರವಿ ಬೆಳಗೆರೆ ಅವರ ಹಾಯ್ ಬೆಂಗಳೂರು, ಪಿ. ಲಂಕೇಶ್ ಅವರ ಲಂಕೇಶ್ ಪತ್ರಿಕೆ. ಇವುಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿದ್ದರೆ ಅದರ ಹಿಂದೆ ಸಾಕಷ್ಟು ತನಿಖೆ, ಪರಿಶೀಲನೆ, ಚರ್ಚೆ ಇರುತ್ತಿತ್ತು. ಸಾಕ್ಷಿ ಇಲ್ಲದೆ ಯಾರ ಮೇಲೂ ಆರೋಪ ಮಾಡುವುದು ಅಸಾಧ್ಯವಾಗಿತ್ತು.

ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಲಿ ಹೋದರೆ ಹುಲಿ ಹೋಯಿತು ಎಂದು ಹೇಳುವ ಮಟ್ಟಿಗೆ ಅತಿರಂಜಿತ ಸುದ್ದಿಗಳು ಬರುತ್ತಿವೆ. ಎಲ್ಲಿಯಾದರೂ ದೀಪಾವಳಿ ರಾಕೆಟ್ ಸಿಡಿದರೆ ಅದನ್ನು ಯುದ್ಧದ ಹೊಗೆ ಎಂದು ಬಿಂಬಿಸುವ ಮಟ್ಟಿಗೆ ಅತಿರೇಕ ಹೆಚ್ಚಾಗಿದೆ.

ಕೆಲವರಿಗೆ ಪತ್ರಿಕೋದ್ಯಮವೆಂದರೆ ಕೇವಲ TRP, ವೈರಲ್‌, ಆದಾಯ ಇಷ್ಟೇ ಆಗಿಬಿಟ್ಟಿದೆ. ಸಮಾಜಮುಖಿ ಹೊಣೆಗಾರಿಕೆ ಎನ್ನುವುದು ಹಿನ್ನಲೆಯಲ್ಲಿ ಉಳಿದಿದೆ.

ಇನ್ನೂ ಒಂದು ವಿಚಿತ್ರ ಸಂಗತಿ ಎಂದರೆ, ಕನಿಷ್ಠ ಶಿಕ್ಷಣವೂ ಇಲ್ಲದ ಕೆಲವರು ತಮ್ಮನ್ನು ಪತ್ರಕರ್ತರುಎಂದು ಘೋಷಿಸಿಕೊಂಡು ಸಮಾಜದ ಮುಂದೆ ಅಬ್ಬರದಿಂದ ಮಾತನಾಡುತ್ತಿದ್ದಾರೆ. ಪ್ರಶ್ನೆ ಒಂದೇ ಇಂತಹ ಪತ್ರಿಕೋದ್ಯಮಕ್ಕೆ ಸಮಾಜದಲ್ಲಿ ಯಾವ ಬೆಲೆ, ಯಾವ ಗೌರವ ಉಳಿಯುತ್ತದೆ?.

ಪತ್ರಿಕೋದ್ಯಮವನ್ನು ನಿಸ್ವಾರ್ಥದಿಂದ ನಡೆಸುವುದು ಅಸಾಧ್ಯವೇ? ಸತ್ಯವನ್ನು ಹುಡುಕುವುದು ಅಷ್ಟೊಂದು ಕಷ್ಟದ ಕೆಲಸವೇ?. ಸಾಕ್ಷಿಯಿಲ್ಲದ ಆರೋಪಗಳು, ಗಾಸಿಪ್‌, ನೆರಳಿನ ಆಟ. ಇವುಗಳು ಸಮಾಜದಲ್ಲಿ ಗೊಂದಲವನ್ನೇ ಹೆಚ್ಚಿಸುತ್ತವೆ. ಇಂತಹ ಆಟ-ಹಾಡಿಕೆ ಪತ್ರಿಕೋದ್ಯಮದಿಂದ ಸಮಾಜದಲ್ಲಿ ಯಾವ ಪರಿವರ್ತನೆ ಸಾಧ್ಯ?.

ಸಮಾಜಕ್ಕೆ ಬೆಳಕು ತರುವ ಪತ್ರಿಕೋದ್ಯಮ ಬೇಕು. ನೆರಳು ಸೃಷ್ಟಿಸುವ ಪತ್ರಿಕೋದ್ಯಮವಲ್ಲ. ಸತ್ಯದ ಕಡೆ ನಿಲ್ಲುವ ಧೈರ್ಯ ಇದ್ದಾಗ ಮಾತ್ರ ಪತ್ರಿಕೋದ್ಯಮಕ್ಕೆ ಗೌರವ ಉಳಿಯುತ್ತದೆ. ಇಲ್ಲವಾದರೆ ಅದು ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವ ಉದ್ಯಮವಾಗಿಯೇ ಸಾಗುತ್ತದೆ…
ಲೇಖನ
: ಶ್ರೀನಿವಾಸ್ ಕೆ ಟಿ, ಸಮಾಜ ಚಿಂತಕ, ಬೆಂಗಳೂರು.

Share This Article
error: Content is protected !!
";