ಒಬಿಸಿ ಮೀಸಲಾತಿ ಮತ್ತು ಕೆನೆಪದರ ಕುರಿತು ಸ್ಪಷ್ಟನೆ ನೀಡಿದ ಸಚಿವ ಶಿವರಾಜ ತಂಗಡಗಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತ ಸಂವಿಧಾನದ ಅನುಚ್ಛೇದ 15(4) ಮತ್ತು 16(4)ರ ಅಡಿಯಲ್ಲಿ ರಾಜ್ಯ ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುತ್ತಿದೆ.

ಪ್ರಸ್ತುತ ಕರ್ನಾಟಕ ಸರ್ಕಾರವು 30.03.2002ರ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000 ರನ್ವಯ ವಿವಿಧ ಪ್ರವರ್ಗಗಳಿಗೆ ಪ್ರವರ್ಗ-1: 04%, ಪ್ರವರ್ಗ-2(ಎ): 15%, ಪ್ರವರ್ಗ-2(ಬಿ): 04%, ಪ್ರವರ್ಗ-3(ಎ): 04%, ಪ್ರವರ್ಗ-3(ಬಿ): 05% ರಂತೆ ಮೀಸಲಾತಿ ನಿಗದಿಪಡಿಸಿದೆ ಎಂದು  ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ತಿಳಿಸಿದರು.

- Advertisement - 

 ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಜಾರಿ ಮತ್ತು ಕೆನೆಪದರ ನೀತಿಯ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.

ಕೆನೆಪದರ (Creamy Layer) ಮಾನದಂಡಗಳು:
ಹಿಂದುಳಿದ ವರ್ಗಗಳ ಮೀಸಲಾತಿ ಪಡೆಯಲು ಅಭ್ಯರ್ಥಿಗಳಿಗೆ ಕೆನೆಪದರ ನೀತಿ ಅಳವಡಿಸಲಾಗಿದೆ. ಇದರ ಪ್ರಮುಖ ನಿಬಂಧನೆಗಳು ಹೀಗಿವೆ:
ಆದಾಯ ಮಿತಿ: ಅಭ್ಯರ್ಥಿಯ ಪೋಷಕರ ವಾರ್ಷಿಕ ಆದಾಯವು 8 ಲಕ್ಷಗಳ ಮಿತಿಯ ಒಳಗಿರಬೇಕು.

- Advertisement - 

ಉದ್ಯೋಗದ ಮಿತಿ: ಅಭ್ಯರ್ಥಿಯ ಪೋಷಕರು ಸರ್ಕಾರದ ಒಂದನೇ ಅಥವಾ ಎರಡನೇ ದರ್ಜೆಯ (Group A or B) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಅಂತಹ ಅಭ್ಯರ್ಥಿಗಳು ಮೀಸಲಾತಿ ಪಡೆಯಲು ಅನರ್ಹರಾಗಿರುತ್ತಾರೆ.

ಕೃಷಿ ಭೂಮಿಯ ಮಿತಿ:
ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಅಡಿಯಲ್ಲಿ 10 ಯುನಿಟ್‍ಗಿಂತ ಹೆಚ್ಚು ಕೃಷಿ ಭೂಮಿ ಅಥವಾ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುವ 20 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು ಮೀಸಲಾತಿಗೆ ಅರ್ಹರಲ್ಲ.

ಕೇಂದ್ರ ಮತ್ತು ರಾಜ್ಯದ ನಿಯಮಗಳ ನಡುವಿನ ವ್ಯತ್ಯಾಸ:
ಕೇಂದ್ರ ಸರ್ಕಾರದ 1993ರ ಅಧಿಸೂಚನೆಯು ಕೃಷಿ ಮತ್ತು ವೇತನ ಆದಾಯ ಹೊರತುಪಡಿಸಿ ಕೆನೆಪದರ ನೀತಿ ಅನುಸರಿಸುತ್ತದೆ.
ಆದರೆ
, ಭಾರತ ಸಂವಿಧಾನದ ಅನುಚ್ಛೇದ 342-ಎ (3) ರ ಅನ್ವಯ, ರಾಜ್ಯ ಸರ್ಕಾರವು ತನ್ನದೇ ಆದ ಹಿಂದುಳಿದ ವರ್ಗಗಳ ಪಟ್ಟಿ ಹೊಂದಲು ಮತ್ತು ಮೀಸಲಾತಿ ನೀತಿ ರೂಪಿಸಲು ಸ್ವತಂತ್ರವಾಗಿದೆ. ಆದ್ದರಿಂದ, ಕೇಂದ್ರದ 1993ರ ಅಧಿಸೂಚನೆಯು ರಾಜ್ಯದ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಗೆ ಅನ್ವಯಿಸುವುದಿಲ್ಲ.

ಅಖಿಲ ಭಾರತ ಕೋಟಾ ಮತ್ತು ರಾಜ್ಯ ಕೋಟಾ:
ಅಖಿಲ ಭಾರತ ಕೋಟಾದಡಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪಡೆಯುವಾಗ ಕೇಂದ್ರ ಸರ್ಕಾರದ ನಿಯಮಗಳು ಅನ್ವಯವಾಗುತ್ತವೆ. ಆದರೆ
, ರಾಜ್ಯದ ಕೋಟಾದಡಿ ಸೀಟು ಪಡೆಯುವಾಗ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಕೆನೆಪದರ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ವೇತನ ಮತ್ತು ಕೃಷಿ ಆದಾಯವನ್ನು ಕೆನೆಪದರ ಮಿತಿಯಿಂದ ಹೊರಗಿಡುವ ಕುರಿತು ಅಥವಾ ಕೇಂದ್ರ ಸರ್ಕಾರದ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸುವ ಬಗ್ಗೆ ಹಲವಾರು ಮನವಿಗಳು ಬಂದಿವೆ.
ಈ ಕುರಿತು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದ್ದು
, ರಾಜ್ಯದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Share This Article
error: Content is protected !!
";