ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿಗೆ ಒಡಿಶಾ ಶಾಸಕರೇ ಬಂದಿದ್ದಾರೆ. ನಾನು ಒಡಿಶಾ ಶಾಸಕರನ್ನು ಕರೆಸಿಲ್ಲ, ಅಧಿವೇಶನ ಕಲಾಪ ಮುಗಿದ ಬಳಿಕ ಅವರನ್ನು ಭೇಟಿ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ರಾಮನಗರದ ರೆಸಾರ್ಟ್ನಲ್ಲಿ ಒಡಿಶಾ ಶಾಸಕರು ಇರುವ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಒಡಿಶಾ ಶಾಸಕರು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದಾರೆ ಎಂದು ಗೊತ್ತಿಲ್ಲ. ಆ ರಾಜ್ಯದ ನಮ್ಮ ಪಿಸಿಸಿ ಅಧ್ಯಕ್ಷರು ಕರೆ ಮಾಡಿ ನಮ್ಮ ಶಾಸಕರು ಬರುತ್ತಿದ್ದಾರೆ ಎಂದು ಹೇಳಿದರು. ಪಕ್ಷದ ವಿಚಾರ ಇರಬೇಕು, ನಾನೇ ಹೋಗಿ ಭೇಟಿ ಮಾಡುವೆ ಎಂದು ಹೇಳಿದ್ದೇನೆ. ಅವರಿಗೆ ಮೈಸೂರು ನೋಡುವ ಆಸೆ ಇದೆ. ಅವರು ನಾವು ಬರುತ್ತೇವೆ ಎಂದು ತಿಳಿಸಿದಾಗ, ನಾನು ಬನ್ನಿ ಎಂದು ಹೇಳಿದೆ.
ಆರಾಮಾಗಿ ಇರುವ ಜಾಗ ಬೇಕು ಎಂದು ಕೇಳಿದರು. ಹೀಗಾಗಿ ಅವರಿಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನವಾಗದಂತೆ ತಡೆಯಲು ನಿಮಗೆ ಪಕ್ಷ ಟಾಸ್ಕ್ ನೀಡಿದೆಯೇ ಎಂದು ಕೇಳಿದಾಗ, ಪಕ್ಷ ಹೇಳಿದ್ದನ್ನು ಮಾಡಬೇಕು. ಎಲ್ಲ ರಾಜ್ಯಗಳಲ್ಲೂ ಈ ರೀತಿ ನಡೆಯುತ್ತಿರುತ್ತದೆ. ಇದು ಹೊಸತೇನಲ್ಲ. ನನ್ನ ಭೇಟಿಗೆ ಸಮಯ ಕೇಳಿದರು. ನಾನು ಅಧಿವೇಶನ ನಡೆಯುತ್ತಿದೆ. ಇಲ್ಲಿಗೆ ಬರಬೇಡಿ, ಕಲಾಪ ಮುಗಿಸಿಕೊಂಡು ನಾನೇ ಬರುತ್ತೇನೆ ಎಂದು ಹೇಳಿರುವೆ ಎಂದು ಡಿಸಿಎಂ ತಿಳಿಸಿದರು.
ಆಪರೇಷನ್ ಕಮಲ ತಪ್ಪಿಸಲು ಈ ಪ್ರಯತ್ನವೇ ಎಂಬ ಪ್ರಶ್ನೆಗೆ, ನನಗೆ ಈ ಬಗ್ಗೆ ಗೊತ್ತಿಲ್ಲ. ಬೆಂಗಳೂರು ಸುರಕ್ಷಿತ ಹೀಗಾಗಿ ಅವರು ಇಲ್ಲಿಗೆ ಬಂದು ವೀಕ್ಷಣೆ ಮಾಡಬೇಕು ಎಂದರು. ನಾನು ಅವರನ್ನು ಭೇಟಿಯಾಗಿಲ್ಲ. ಅವರು ನಮ್ಮ ಸಹೋದ್ಯೋಗಿಗಳು. ಅವರು ಬರುತ್ತಾರೆ ಎಂದಾಗ ಹಾಗೂ ಪಿಸಿಸಿ ಅಧ್ಯಕ್ಷರು ನನಗೆ ಈ ವಿಚಾರವಾಗಿ ಕೇಳಿದಾಗ, ನಾನು ಬನ್ನಿ ಎಂದು ಹೇಳಿರುವೆ.
ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಇದನ್ನು ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದ ಸಮಯದಿಂದಲೂ ಮಾಡಿಕೊಂಡು ಬರುತ್ತಿರುವೆ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ, ಮಧ್ಯಪ್ರದೇಶ ಸೇರಿದಂತೆ ಅನೇಕ ಬಾರಿ ಈ ಕೆಲಸ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಪಕ್ಷಕ್ಕೆ ಸಂಕಷ್ಟ(ಟ್ರಬಲ್) ಬಂದಾಗೆಲ್ಲಾ ನೀವೇ ತಲೆ ಕೊಡುತ್ತೀರಿ, ನಿಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲವಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಕಾಲ ನಿರ್ಣಯ ಮಾಡುತ್ತದೆ ಎಂದು ಡಿಸಿಎಂ ಉತ್ತರಿಸಿದರು.

