ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುಕೆಪಿ –3ನೇ ಹಂತದ ಯೋಜನೆಗೆ 15 ವರ್ಷದ ಹಿಂದೆ ಕೋರ್ಟಿನ ಆದೇಶ ಬಂತು. ಕೇಂದ್ರ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲಿಲ್ಲ ಎಂದು ಜಲಸಂಪನ್ಮೂಲ ಸಚಿವರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಆರೋಪಿಸಿದರು.
ಭೂಸಂತ್ರಸ್ತ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಭಾಗದವರು ಬೆಳಗಾವಿ ಅಧಿವೇಶನದಲ್ಲಿ ನನ್ನ ಮೇಲೆ, ಮುಖ್ಯಮಂತ್ರಿಗಳು, ಎಂ.ಬಿ ಪಾಟೀಲರು ಹಾಗೂ ಆರ್.ಬಿ ತಿಮ್ಮಾಪುರ ಅವರ ಮೇಲೆ ಒತ್ತಡ ಹಾಕಿದ್ರು ಎಂದು ಡಿಸಿಎಂ ತಿಳಿಸಿದರು.
1,33,000 ಎಕರೆಗಳಿಗೆ ಹಣವನ್ನು ಕೊಡಲು ತೀರ್ಮಾನ ಮಾಡಿ ಚೆಕ್‌ಕೊಡಲು ಹೊರಟಿದ್ದೇವೆ. ಈ ತೀರ್ಮಾನ ನೋಡಿ ಕೃಷ್ಣ ಅಣೆಕಟ್ಟನ್ನು 524 ಅಡಿಗೆ ಏರಿಸಬಾರದು, ರೈತರಿಗೆ ಪರಿಹಾರ ನೀಡಬಾರದು ಎಂದು ಕೇಂದ್ರ ಸರ್ಕಾರದ ಮೇಲೆ ಆಂಧ್ರ ಸರ್ಕಾರ ಒತ್ತಡ ಹಾಕುತ್ತಿದೆ.
ಮಹಾರಾಷ್ಟ್ರದವರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ನಮ್ಮ ನೀರು… ನಮ್ಮ ಭೂಮಿ.. ನಮ್ಮ ಹಕ್ಕು ಎಂದು ನುಡಿದಂತೆ ನಡೆದಿದ್ದೇವೆ. 3 ಸಾವಿರ ಕೋಟಿ ರೂಪಾಯಿ ಈ ವರ್ಷವೇ ವಿತರಿಸಲು ನಿರ್ಧರಿಸಿದ್ದೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ನಾವು ಮಾಡುವ ಪ್ರತಿ ಕೆಲಸದಲ್ಲೂ ಆದರ್ಶವಿರಬೇಕು. ಇಂದು ಮೆಡಿಕಲ್‌ಕಾಲೇಜು ಬಡವರಿಗೋಸ್ಕರ ಉಚಿತವಾಗಿ ಕೊಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಯವರು ಹಣ ವಸೂಲಿ ಮಾಡುತ್ತಿದ್ದಾರೆ, ಅದನ್ನು ತಪ್ಪಿಸೋ ಸಲುವಾಗಿ ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್‌ಕಾಲೇಜು ನಿರ್ಮಿಸಲು ಕಾಂಗ್ರೆಸ್‌ಸರ್ಕಾರ ಸಂಕಲ್ಪ ಮಾಡಿ, ಇಡೀ ದೇಶಕ್ಕೆ ಮಾದರಿಯಾದ ಕೆಲಸ ಮಾಡಿದ್ದೇವೆ. ಮೇಟಿಯವರ ಕನಸು, ಈ ಜಿಲ್ಲೆಯ ಶಾಸಕರ ಪರಿಶ್ರಮ ಹಾಗೂ ಹೋರಾಟದಿಂದ ಈ ಅಭಿವೃದ್ಧಿ ಯೋಜನೆಗಳು ಸಾಕ್ಷಿಗುಡ್ಡೆಗಳಾಗಿ ಉಳಿಯಲಿವೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.

