ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪಶು ಆಹಾರಗಳ ಬೆಲೆ ಏರಿಕೆ ಹಾಗೂ ಬಿರು ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ, ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ ರಾಸುಗಳಿಗೆ ಮೇವು ಇಲ್ಲದೆ ಪರದಾಟ.. ಹೀಗೆ ಸಾಲು ಸಾಲು ಸಮಸ್ಯೆಗಳಿಂದಲೇ ಬಸವಳಿದಿದ್ದ ರೈತರಿಗೆ ಬಮುಲ್ ಒಕ್ಕೂಟ ಬಂಪರ್ ಖುಷಿ ಸುದ್ದಿ ನೀಡಿದೆ.
ಮಾಜಿ ಸಂಸದ ಡಿ.ಕೆ. ಸುರೇಶ್ ಬಮುಲ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ 9 ತಿಂಗಳಲ್ಲಿ ಬರೊಬ್ಬರಿ 6೦ ಕೋಟಿ ರೂ. ಲಾಭಾಂಶವನ್ನು ಬೆಂಗಳೂರು ಹಾಲು ಒಕ್ಕೂಟಗಳಿಸಿದೆ. ಅಲ್ಲದೆ ಹಿಂದಿನ ಆಡಳಿತ ಮಂಡಳಿಗಳಲ್ಲಿ ದಾಖಲಾಗಿದ್ದ 14 ಕೋಟಿ ರೂ. ಸಾಲವನ್ನು ಚುಕ್ತಾ ಮಾಡಿದೆ, ಬಮುಲ್ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿರುವ 2294 ಡೇರಿಗಳಿಂದ ,127,644 ರೈತರಿಗೆ ಪ್ರತಿ ಲೀಟರ್ ಹಾಲಿಗೆ 1 ರೂ.ನೀಡಲು ತೀರ್ಮಾನಿಸಿದ್ದು, ರೈತರಿಗೆ ಯುಗಾದಿ ಹಬ್ಬದ ಬೋನಸ್ ಘೋಷಿಸಿದೆ. ಈ ಮೂಲಕ ರೈತರ ಮೊಗದಲ್ಲಿ ನಗುವನ್ನು ಮೂಡಿಸಿದೆ.
6೦ ಕೋಟಿ ರೂ. ಲಾಭ ಗಳಿಸಿರುವ ಬೆಂಗಳೂರು ಹಾಲು ಒಕ್ಕೂಟವು ಲಾಭದ ಸಂಪೂರ್ಣ ಹಣವನ್ನು ರೈತರಿಗೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷ ಡಿ.ಕೆ ಸುರೇಶ್ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಳೆದ 2025 ಏಪ್ರಿಲ್ ೧ ರಿಂದ ಮಾರ್ಚ್ 13, 2026ಕ್ಕೆ ಅನ್ವಯವಾಗುವಂತೆ ಒಕ್ಕೂಟದ ವ್ಯಾಪ್ತಿಯ ಸಕ್ರಿಯ 127,644 ರೈತರಿಗೆ ಡೇರಿಗಳಿಗೆ ಹಾಕಿರುವ ಪ್ರತಿ ಲೀಟರ್ ಹಾಲಿಗೆ ತಲಾ ಒಂದು ರೂಪಾಯಿಯಂತೆ ಪ್ರೋತ್ಸಾಹ ಧನ ವಿತರಿಸಲು ತೀರ್ಮಾನ ಮಾಡಿದೆ.
ಡಿ.ಕೆ ಸುರೇಶ್ ಬಮುಲ್ ಒಕ್ಕೂಟದ ಅಧ್ಯಕ್ಷರಾದ 9 ತಿಂಗಳ ಅವಧಿಯಲ್ಲಿ ಬೆಂಗಳೂರ ಹಾಲು ಒಕ್ಕೂಟದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಪಾರದರ್ಶಕತೆ ಆಡಳಿತದ ಫಲವಾಗಿ 6೦ ಕೋಟಿ ಲಾಭಂಶವನ್ನು ಬಮುಲ್ ಸಾಧಿಸಿದೆ. ಪ್ರಸ್ತುತ ಬಮುಲ್ ಒಕ್ಕೂಟದಲ್ಲಿರುವ ವಿವಿಧ ಪದಾರ್ಥಗಳಿಂದ 130 ಕೋಟಿ ಮೌಲ್ಯದ ದಾಸ್ತಾನಿನಿಂದ 60 ಕೋಟಿ ಲಾಭದ ನಿರೀಕ್ಷೆ ಹೊಂದಿದ್ದು, ಇದೀಗ ರೈತರ ಪ್ರಾತಿನಿಧಿಕ ಸಂಸ್ಥೆಯಾದ ಬಮುಲ್ ಲಾಭದತ್ತ ಮುಖಮಾಡಿರುವುದು ರೈತರಿಗೆ ಖುಷಿ ನೀಡಿದೆ.
ಪ್ರತಿ ಡೇರಿಗೆ 15 ಸಾವಿರ ಹಣ: ಒಕ್ಕೂಟದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 2294 ಡೇರಿಗಳ ಕಾರ್ಯದರ್ಶಿಗಳು, ಹಾಲು ಪರೀಕ್ಷಕರು ಮತ್ತು ಅಲ್ಲಿನ ಸಿಬ್ಬಂದಿಗಳಿಗೂ ಆದ್ಯತೆ ನೀಡಿರುವ ಬಮುಲ್ ತಲಾ ಒಂದು ಡೇರಿಗೆ 15 ಸಾವಿರ ಸಹಾಯ ಧನ ಘೋಷಣೆ ಮಾಡಿದೆ. ಅಲ್ಲದೆ ಟಿಎ ಡಿಎ ಸೇರಿದಂತೆ ಬಾಕಿ ಇದ್ದಂತಹ ಎಲ್ಲಾ ಬಾಕಿ/ಖರ್ಚುಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ. 1800 ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ತಲಾ 5೦೦೦ ರೂ. ನೀಡುವ ಮೂಲಕ ಸಿಬ್ಬಂದಿಗಳ ನೆರವಿಗೂ ಧಾವಿಸಿದೆ.
ಪಶು ಆಹಾರದತ್ತ ಚಿತ್ತ:
ರೈತರ ಪ್ರಮುಖ ಬೇಡಿಕೆಯಾಗಿರುವ ಪಶು ಆಹಾರದ ಬೆಲೆ ಕಡಿವಾಣಕ್ಕೆ ಬೇಕಾದ ಕ್ರಮಗಳನ್ನು ಜರುಗಿಸಲು ಒಕ್ಕೂಟ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಪಶು ಆಹಾರ ಬೆಲೆಗಳು ರೈತರಿಗೆ ಕೈಗೆಡುಕುವ ರೀತಿಯಲ್ಲಿ ಜಾರಿ ಮಾಡಲು ಶ್ರಮಿಸಲಾಗುವುದು ಎಂದು ಬಮುಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ತಿಳಿಸಿದ್ದಾರೆ.
ಹಸುಗಳಿಗಾಗಿ ಸಾಲದ ಮೇಳ:
ಗ್ರಾಮೀಣ ಭಾಗದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವ ಸಲುವಾಗಿ ರೈತರಿಗೆ ನೇರವಾಗಿ ಸಾಲ ನೀಡಲು ಮುಂದಾಗಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ (ಡಿಸಿಸಿ) ಮೂಲಕ ಹೊಸ ಹಸು ಖರೀದಿಗೆ ವಿಶೇಷ ಸಾಲ ಯೋಜನೆ ನೀಡಲಾಗುವುದು. ಪ್ರತಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ 25 ಜನ ರೈತರಿಗೆ ವಾರ್ಷಿಕ ಶೇ 3 ಬಡ್ಡಿ ದರದಲ್ಲಿ ರೂ. 1.60 ಲಕ್ಷದಿಂದ ರ. 15 ಲಕ್ಷ ವರೆಗೆ ಸಾಲ ನೀಡಲಾಗುವುದು. ಇದಕ್ಕಾಗಿ ಸಾಲದ ಮೇಳವನ್ನು ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆನಂದ್ ತಿಳಿಸಿದ್ದಾರೆ.
“ಬಮುಲ್ ಅಧ್ಯಕ್ಷ ಡಿ.ಕೆ ಸುರೇಶ್ ಅವರ ಪ್ರಾಮಾಣಿಕ ಪ್ರಯತ್ನದಿಂದಾಗಿ ಆಡಳಿತ ಮಂಡಳಿ ರಚನೆಯಾದ 9 ತಿಂಗಳಲ್ಲಿ ಬಮುಲ್ ಒಕ್ಕೂಟ ದಾಖಲೆಯ 6೦ ಕೋಟಿ ರೂ. ಲಾಭಂಶ ಗಳಿಸಿದೆ. ಸಂಪೂರ್ಣ ಲಾಭದ ಹಣವನ್ನು ಹಾಲು ಉತ್ಪಾದಕ ರೈತರಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ರೈತರಿಗೆ ಬೆಂಗಳೂರು ಹಾಲು ಒಕ್ಕೂಟ ಸದಾ ಬೆಂಬಲವಾಗಿರಲಿದೆ. ರೈತರು ಗುಣಮಟ್ಟದ ಹಾಲು ನೀಡಿ ಒಕ್ಕೂಟಕ್ಕೆ ಸಹಕರಿಸಬೇಕು”.
ಬಿ.ಸಿ ಆನಂದ್ ಕುಮಾರ್, ಬಮುಲ್ ನಿರ್ದೇಶಕ.
“ಯುಗಾದಿ ಹಬ್ಬದ ಸಮಯದಲ್ಲಿ ರೈತರಿಗೆ ಬಮುಲ್ ಒಕ್ಕೂಟ ಸಂತಸದ ಸುದ್ದಿ ಹೇಳಿರುವುದು ಸ್ವಾಗತಾರ್ಹ. ಬಮುಲ್ ಅಧ್ಯಕ್ಷ ಡಿ.ಕೆ ಸುರೇಶ್ ಅವರ ಆಡಳಿತಾವಧಿಯಲ್ಲಿ ಪರಿಣಾಮಕಾರಿ ಬದಲಾವಣೆ ಆಗಿರುವುದು ಸ್ಪಷ್ಟವಾಗಿದೆ. ಸಂಪೂರ್ಣ ಲಾಭವನ್ನು ಹಾಲು ಉತ್ಪಾದಕರಿಗೆ ನೀಡುತ್ತಿರುವುದು ಅತ್ಯಂತ ಸೂಕ್ತ ತೀರ್ಮಾನ”.
ರವಿಕುಮಾರ್, ತಾಲ್ಲೂಕು ಡೇರಿಗಳ ಸಂಘದ ಅಧ್ಯಕ್ಷ.ಕೋಟ್:
“ಪ್ರಸಕ್ತ ಅವಧಿಯಲ್ಲಿ ಹಾಲಿನ ಬೇಡಿಕೆ ಹೆಚ್ಚಿದೆ. ಒಕ್ಕೂಟವು ಪೂರೈಕೆಯನ್ನು ಸಮರ್ಪಕವಾಗಿ ಮಾಡಿದರೆ ಮತ್ತಷ್ಟು ಲಾಭ ಸಿಗಲಿದೆ. ರೈತರಿಗೆ ಲಾಭಂಶದ ಹಣವನ್ನು ನೀಡುತ್ತಿರುವುದು ಸಂತಸ. ನಂದಿನಿಯ ಮಾರುಕಟ್ಟೆ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು. ಹಾಲು ಕರೆಯುವ ಮಷಿನ್, ಮ್ಯಾಟ್ ಗಳಿಗೆ ಹಣ ಕಟ್ಟಿಸಿಕೊಂಡು ಎರಡು ತಿಂಗಳಾದರೂ ಇನ್ನು ಕೊಟ್ಟಿಲ್ಲ. ಶೀಘ್ರವಾಗಿ ವಿತರಿಸಬೇಕು”.
ಪ್ರಸನ್ನ, ರೈತ ಸಂಘದ ಜಿಲ್ಲಾಧ್ಯಕ್ಷ.

