ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಡಿಶಾದ ಕಾಂಗ್ರೆಸ್ ಶಾಸಕರಿಗೆ ಐದು ಕೋಟಿ ಆಫರ್ ಕೊಟ್ಟು ಕುದುರೆ ವ್ಯಾಪಾರಕ್ಕೆ ಯತ್ನಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಡಿಶಾದ ಕಾಂಗ್ರೆಸ್ ಶಾಸಕರು ಬಿಡದಿಯ ರೆಸಾರ್ಟ್ನಲ್ಲಿ ಇದ್ದರು. ಬ್ಯಾಟರಾಯನಪುರ ಸುರೇಶ್ ಎಂಬುವನ ಮೂಲಕ ಬಿಜೆಪಿಯವರು ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಉಳಿದುಕೊಂಡಿದ್ದಾರೆ. ಅವರು ನಮ್ಮ ಶಾಸಕರನ್ನು ಸಂಪರ್ಕಿಸಿ ಐದು ಕೋಟಿ ಆಫರ್ ಮಾಡಿದ್ದಾರೆ ಎಂದು ಡಿಸಿಎಂ ಶಿವಕುಮಾರ್ ದೂರಿದ್ದಾರೆ.
ಬಿಜೆಪಿ ಅವರ ಕುದುರೆ ವ್ಯಾಪಾರಕ್ಕೆ ಒಡಿಶಾ ಕಾಂಗ್ರೆಸ್ ಶಾಸಕರು ಒಪ್ಪಿಲ್ಲ. ಕುದುರೆ ವ್ಯಾಪಾರಕ್ಕಾಗಿ ಬಂದಿದ್ದ ಒಟ್ಟು ನಾಲ್ಕು ಜನರಲ್ಲಿ ಇಬ್ಬರನ್ನು ನಮ್ಮವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಲ್ಲದೆ ಬ್ಲ್ಯಾಂಕ್ ಚೆಕ್ ಸಮೇತ ನಮ್ಮವರು ಹಿಡಿದಿದ್ದಾರೆ. ಪೊಲೀಸರಿಗೂ ದೂರು ಕೊಟ್ಟಿದ್ದಾರೆ.ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಇದು ಆಪರೇಷನ್ ಕಮಲದ ಯತ್ನವಾಗಿದೆ. ಎಐಸಿಸಿ ಅಧ್ಯಕ್ಷರನ್ನು ಒಡಿಶಾ ಶಾಸಕರು ಭೇಟಿ ಮಾಡಿ ಎಲ್ಲವನ್ನೂ ವಿವರಿಸಲಿದ್ದಾರೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.
ಮಾರ್ಚ್ 16 ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಆಪರೇಷನ್ ಕಮಲದ ಭೀತಿಯಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕರು ಬಿಡದಿಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಎರಡು ದಿನಗಳಿಂದ ಇಲ್ಲೇ ಇದ್ದು, ನೇರವಾಗಿ ಚುನಾವಣೆಗೆ ತೆರಳಲಿದ್ದಾರೆ.
ಆಮಿಷ ಒಡ್ಡಿದವರಿಗೆ ರಿಪೇರಿ:
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಿಬಿಎ ಚುನಾವಣೆಗೆ ಕಾಂಗ್ರೆಸ್ ಆಕ್ಷಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಹಿಂದೆ ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಿದ್ರು. ಆಗ ಕೂಡ ನಾನು ನೋಡಿಕೊಂಡಿದ್ದೆ. ಏನೇನು ನೋವು ಅನುಭವಿಸಿದೆ ಅನ್ನೋದು ಗೊತ್ತಿದೆ. ಈಗ ಒಡಿಶಾ ಶಾಸಕರಿಗೆ ಆಮಿಷ ಒಡ್ಡಿದವರಿಗೆ ಏನೇನು ರಿಪೇರಿ ಮಾಡಬೇಕು ಮಾಡಿದ್ದೇವೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ನಾನು ಜಿಬಿಎ ಚುನಾವಣೆ ಮಾಡುತ್ತೇನೆ. 369 ವಾರ್ಡ್ಗಳಿಗೆ ಚುನಾವಣೆ ನಡೆದೇ ನಡೆಯುತ್ತದೆ. 963 ಜನರು ಟಿಕೆಟಿಗಾಗಿ ಅರ್ಜಿ ಹಾಕಿದ್ದೀರಿ. ಹಿಂದೆ ಬಹಳಷ್ಟು ಜನರಿಗೆ ವಿಧಾನಸಭೆಗೆ ಟಿಕೆಟ್ ನೀಡಿಲ್ಲ. ನನಗೂ ಆ ವಿಚಾರವಾಗಿ ಸಮಾಧಾನ ಇಲ್ಲ. ಯಾರಿಗೆ ಟಿಕೆಟ್ ಕೊಟ್ಟಿಲ್ಲ ಅಂಥ 47 ಜನರನ್ನು ಬೋರ್ಡ್ ಚೇರ್ಮನ್ ಮಾಡಿದ್ದೇವೆ. ಈ ಚುನಾವಣೆ ಬ್ಯಾಲೆಟ್ ಪೇಪರ್ನಲ್ಲಿ ನಡೆಯಲಿದೆ. ಮತದಾರರ ಪಟ್ಟಿ ಹೊಸದಾಗಿ ಸಿದ್ಧಪಡಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

