ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಸಕರು ಕೇಳುವ ಪ್ರಶ್ನೆಗಳಿಗೆ ಸರಿಯಾದ ವೇಳೆಗೆ ಸಚಿವರು ಉತ್ತರ ನೀಡದ ಕಾರಣ ವಿಧಾನಸಭಾಪತಿಗಳಾದ ಯು.ಟಿ.ಖಾದರ್ ಅವರು ಬೇಸರ ವ್ಯಕ್ತಪಡಿಸಿ ಸದನವನ್ನು ಮುಂದೂಡಿ ಸದನದಿಂದ ಹೊರ ನಡೆದರು.
ಇಂದು ಬೆಳಿಗ್ಗೆ ಪ್ರಶ್ನೋತ್ತರ ಕಲಾಪ ನಡೆಸಿದ ನಂತರ ಲಿಖಿತ ಪ್ರಶ್ನೆಗಳಿಗೆ ಉತ್ತರವನ್ನು ಮಂಡಿಸುವಂತೆ ಸಭಾಧ್ಯಕ್ಷರು ಸರ್ಕಾರಕ್ಕೆ ಸೂಚನೆ ನೀಡಿದಾಗ ಸರ್ಕಾರದ ಪರವಾಗಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು 283 ಪ್ರಶ್ನೆಗಳಲ್ಲಿ 84 ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗಿದೆ ಎಂದು ತಿಳಿಸಿದ ಕೂಡಲೇ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಅವರು ನಾಲ್ಕು ದಿನಗಳಾದರೂ ತಮ್ಮ ಪ್ರಶ್ನೆಗೆ ಉತ್ತರವೇ ಬಂದಿಲ್ಲ ಎಂದು ಸಭಾಧ್ಯಕ್ಷರಿಗೆ ದೂರು ನೀಡಿದರು.
ಈಗಾಗಲೇ ಮೂರ್ನಾಲ್ಕು ಬಾರಿ ಎಚ್ಚರಿಕೆ ನೀಡಿದ್ದರೂ ಶಾಸಕರು ಕೇಳುವ ಪ್ರಶ್ನೆಗಳಲ್ಲಿ ಶೇಕಡ 50 ರಷ್ಟು ಪ್ರಶ್ನೆಗಳಿಗೂ ಉತ್ತರವನ್ನು ನೀಡದ ಕಾರಣ ಸಚಿವರು ಮತ್ತು ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿ, ಸದನದಿಂದ ಹೊರ ನಡೆದ ಕಾರಣ ಸುಮಾರು ಒಂದು ಗÀಂಟೆಗಳ ಕಾಲ ವಿಧಾನಸಭಾ ಕಲಾಪ ಜರುಗಲಿಲ್ಲ.
ಸ್ವತಃ ಮುಖ್ಯಮಂತ್ರಿ ಅವರೇ ಸಚಿವರ ಪರವಾಗಿ ಬಂದು ಸಭಾಧ್ಯಕ್ಷರ ಬಳಿ ಈ ಬಗ್ಗೆ ಚರ್ಚಿಸಿ, ಮುಂದೆ ಈ ರೀತಿ ಆಗದೆಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೀಠಕ್ಕೆ ಮರಳಿದ ಬಂದ ಸಭಾಧ್ಯಕ್ಷರು ಸದನವನ್ನು ಭೋಜನಕ್ಕೆ ಮುಂದೂಡಿದರು.

