ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆದಿಚುಂಚನಗಿರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಕುರಿತು ಶ್ರೀರಂಗಪಟ್ಟಣದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರು ಆಡಿರುವ ಹಗುರವಾದ ಮಾತುಗಳು ಅಕ್ಷಮ್ಯ. ಬಂಡಿಸಿದ್ದೇಗೌಡರ ಮಾತನ್ನು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಅವರು ತೀವ್ರವಾಗಿ ಖಂಡಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿಕ್ಷಣ, ವಸತಿ, ದಾಸೋಹ, ಆರೋಗ್ಯ ಸೇವೆಗಳನ್ನು ನಾಡಿಗೆ ಒದಗಿಸಿ, ರಾಜ್ಯದ ಬೆಳವಣಿಗೆಗೆ ಆಮೂಲಾಗ್ರ ಕೊಡುಗೆ ನೀಡುತ್ತಾ ಬಂದಿದೆ. ಆದರೆ, ಕರ್ನಾಟಕ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹಿಂದೂ ಮಠ ಮಂದಿರಗಳ, ಸಾಧು ಸಂತರ ಕುರಿತು ಹಗುರವಾದ ಮಾತುಗಳನ್ನೇ ಆಡುತ್ತಾ ಬಂದಿರುವ ಹಿಂದೂ ವಿರೋಧಿ ಪಕ್ಷ.
ಒಂದು ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲಿ, ಲಕ್ಷಾಂತರ ಭಕ್ತರ ಆರಾಧ್ಯ ಗುರುಗಳಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ವಿರುದ್ಧ ನಾಲಿಗೆ ಹರಿಬಿಟ್ಟಿರುವುದನ್ನು ಸಮಾಜ ಕ್ಷಮಿಸಲು ಸಾಧ್ಯವೇ ಇಲ್ಲ. ಸಮಾಜಕ್ಕೆ ಸರಿ ದಾರಿ ತೋರುವ ಗುರುಗಳು ಯಾವ ಹಾದಿಯಲ್ಲಿ ನಡೆಯಬೇಕು ಎನ್ನುವುದನ್ನು ಬಂಡಿಸಿದ್ದೇಗೌಡರು ಹೇಳಿಕೊಡಬೇಕೇನು?.
ಮೊದಲು ಶ್ರೀಮಠ ಒಂದು ಧಾರ್ಮಿಕ ಕ್ಷೇತ್ರವೇ ಹೊರತು ರಾಜಕಾರಣದ ಅಖಾಡವಲ್ಲ ಎನ್ನುವುದನ್ನು ಕಾಂಗ್ರೆಸ್ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ತಕ್ಷಣವೇ ಈ ಅರ್ಥವಿಲ್ಲದ ಮಾತಿಗೆ ಮಠಕ್ಕೆ ಭೇಟಿ ನೀಡಿ, ಗುರುಗಳ ಕ್ಷಮೆ ಯಾಚಿಸದಿದ್ದರೆ ಬಂಡಿಸಿದ್ದೇಗೌಡರನ್ನು ಸಮಾಜ ಕ್ಷಮಿಸುವುದಿಲ್ಲ ಎಂದು ರವಿ ಅವರು ಎಚ್ಚರಿಸಿದರು.

