ಯೋಗ, ದ್ಯಾನ ಮನಸ್ಸು, ಶರೀರಕ್ಕೆ ಬಹಳ ಅಗತ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ಯೋಗ, ದ್ಯಾನ ಮನಸ್ಸು, ಶರೀರಕ್ಕೆ ಬಹಳ ಅಗತ್ಯವಾಗಿದ್ದು, ನಿತ್ಯ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುವ ಪೊಲೀಸರಿಗೂ ಇದು ಬೇಕೇ ಬೇಕು. ಪತಂಜಲಿ ಯೋಗ ಸಮಿತಿಯವರು ಪೊಲೀಸರಿಗೆ ವಿಶೇಷ ಯೋಗ ಶಿಬಿರ ನಡೆಸುವ ಮೂಲಕ ಸಮಾಜದ ರಕ್ಷಕರ ಆರೋಗ್ಯ ಸುಧಾರಣೆಗೆ ನೆರವಾಗಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠರಾದ ಎಸ್.ಜಾಹ್ನವಿ ಹೇಳಿದರು.

ಮಹಿಳಾ ಪತಂಜಲಿ ಯೋಗ ಸಮಿತಿ, ಪತಂಜಲಿ ಯೋಗ ಸಮಿತಿಗಳ ಆಶ್ರಯದಲ್ಲಿ ಇಲ್ಲಿನ ಕೊಟ್ಟೂರುಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಸಂಜೆ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ದೈನಂದಿನ ಕೆಲಸ ಮಾಡುತ್ತಲೇ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಮಹಿಳೆಯರು ಪತಂಜಲಿ ಸಮಿತಿಯಲ್ಲಿ ಇದ್ದು, ಅವರು ಸಮಾಜಕ್ಕೆ ಆದರ್ಶರಾಗಿದ್ದಾರೆ, ಪೊಲೀಸರಿಗೆ ಸಹ ಇವರ ಸೇವೆ ಲಭಿಸಬೇಕಾಗಿದೆ ಎಂದರು.

- Advertisement - 

ಮಹಿಳೆಯರು ಮನೆಯಿಂದ ಹೊರಬಂದು ಯಾವುದಾದರೂ ಒಂದು ಕೆಲಸದಲ್ಲಿ ತೊಡಗಿಸಿಕೊಂಡರೆ ಅದು ಪರಿಪೂರ್ಣ ಎನಿಸುವ ರೀತಿಯಲ್ಲೇ ಮಾಡಿಬಿಟ್ಟಿರುತ್ತಾರೆ. ಅವರ ಕೆಲಸ ಹೃದಯ ಮತ್ತು ಮನಸ್ಸಿಗೆ ತಟ್ಟುವಂತೆಯೂ ಇರುತ್ತದೆ, ‍‍ಪತಂಜಲಿ ಸಮಿತಿಯಲ್ಲಿ ತೊಡಗಿಸಿಕೊಂಡವರ ಸಾಧನೆ ಇದನ್ನು ಬಿಂಬಿಸುತ್ತದೆ ಎಂದರು.

ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಮಾತನಾಡಿ, ಸದ್ಯದ ಜಾಗತಿಕ ಕ್ಷೋಭೆಗೆ ಯೋಗ ಉತ್ತಮ ಪರಿಹಾರ ಎಂದರು.

- Advertisement - 

ಮಹಿಳಾ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಶ್ರೀದೇವಿ ಅಶೋಕ್‌ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಭಾರಿ ಗೌರಮ್ಮ ಬ್ಯಾಳಿ ಅವರು ಯೋಗದಿಂದ ತಮ್ಮ ಅನಾರೋಗ್ಯ ಮೆಟ್ಟಿನಿಂತಿದ್ದನ್ನು ಹಾಗೂ ತಮ್ಮ ಪಿಂಚಣಿ ದುಡ್ಡನ್ನು ಸಂಪೂರ್ಣ ಯೋಗ ಸಂಬಂಧಿತ ಕೆಲಸಗಳಿಗೇ ಮೀಸಲಿಟ್ಟಿದ್ದನ್ನು ತಿಳಿಸಿದರು.

ಸನ್ಮಾನ: ಇದೇ ಸಂಧರ್ಭದಲ್ಲಿ ಹಲವು ವರ್ಷಗಳಿಂದ ಯೋಗವನ್ನು ಬೋಧಿಸುತ್ತ, ಸಾವಿರಾರು ಮಂದಿಗೆ ಯೋಗದ ಗುಟ್ಟು ಹೇಳಿಕೊಟ್ಟ ಮಹಿಳಾ ಯೋಗ ಸಾಧಕರಾದ ಉಮಾ ವಿಶ್ವನಾಥ್‌, ದಾಕ್ಷಾಯಿಣಿ ಶಿವಕುಮಾರ್‌, ರೇಣುಕಾ ಪಾಟೀಲ್, ರೇಣುಕಾ ಪರಗಿ, ಗೌರಮ್ಮ ಬ್ಯಾಳಿ ಮತ್ತು ಮಂಗಳಮ್ಮ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಹಲವು ಯೋಗ ಕೇಂದ್ರಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರನ್ನು ಗೌರವಿಸಲಾಯಿತು. ಯೋಗ ನೃತ್ಯ ಸಹಿತ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.

ಅನಂತ ಜೋಶಿ ಸ್ವಾಗತಿಸಿದರು. ಪ್ರೊ.ಎಫ್‌.ಟಿ.ಹಳ್ಳಿಕೇರಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಜಮಖಂಡಿಕರ್‌ ವಂದಿಸಿದರು. ಶೈಲಜಾ ಕಳಕಪ್ಪ ನಿರೂಪಿಸಿದರು. ಪತಂಜಲಿ ಯೋಗ ಸಮಿತಿಯ ಅಜೀವ ಸದಸ್ಯರು, ಯೋಗ ಸಾಧಕರಾದ ಕಿರಣ್‌ ಕುಮಾರ್, ಬಾಲಚಂದ್ರ ಶರ್ಮಾ, ರಾಜೇಶ್ ಕಾರ್ವಾ, ವಿಠೋಬಣ್ಣ, ವೀರೇಶ್‌ ಇತರರು ಇದ್ದರು.

 

 

Share This Article
error: Content is protected !!
";