ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಾನು ಯಾರು? ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಧ್ಯಾನಾಭ್ಯಾಸ ಮಾಡಿಸಿ ನಾನು ಯಾರು ? ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.
ನಾನು ಯಾರು? ಎಂಬ ಪ್ರಶ್ನೆಗೆ ನಾನು ದೇಹ ಮಾತ್ರ ಎಂದು ಭಾವಿಸದೆ ನಿಜವಾಗಿ ನಾವು ಆತ್ಮಸ್ವರೂಪ ಎಂಬುದನ್ನು ತಿಳಿದುಕೊಳ್ಳಬೇಕು.ಆತ್ಮವು ನಿತ್ಯ-ಶುದ್ಧ,ಬುದ್ಧ ಮತ್ತು ಮುಕ್ತ ಸ್ವರೂಪವಾಗಿರುತ್ತದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸಂನ್ಯಾಸಿ ಗೀತೆಯ ಗಾಯನ ನಡೆಯಿತು.
ತರಗತಿಯಲ್ಲಿ ಡಾ.ಭೂಮಿಕಾ, ಚೇತನ್, ಸುದೀಪ್, ಹೃತಿಕ್,ಸಂಜನಾ, ಅಂಬುಜಾ,ರಾಧಾ ಶ್ರೀಪಾದ್, ಪುಷ್ಪಲತಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

