ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಜ್ಯಸಭೆಯಿಂದ ಏಪ್ರಿಲ್ ಮತ್ತು ಜುಲೈ ಅವಧಿಯೊಳಗೆ ನಿವೃತ್ತಿ ಆಗುತ್ತಿರುವ 59 ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸೂಚಿಸಿ ಬೀಳ್ಕೊಡುಗೆ ಭಾಷಣ ಮಾಡಿದರು. ಈ ವೇಳೆ, ಸಂಸತ್ ಅನ್ನು ಮುಕ್ತ ವಿಶ್ವವಿದ್ಯಾಲಯ ಎಂದ ಅವರು, ನಿವೃತ್ತಿ ಬಳಿಕವೂ ಸಂಸದರು ತಮ್ಮ ದೇಶ ಸೇವೆ ಮುಂದುವರೆಸುವಂತೆ ಒತ್ತಾಯಿಸಿದರು.
ಮೇಲ್ಮನೆ ಸದಸ್ಯರ ಬಿಳ್ಕೋಡುಗೆ ಸಂದರ್ಭದಲ್ಲಿ ವಿದಾಯದ ಭಾಷಣ ಮಾಡಿದ ಅವರು, ಇಂತಹ ಕ್ಷಣಗಳು ಪಕ್ಷದ ವಿಭಜನೆಯನ್ನು ಸಹಜವಾಗಿ ಅಳಿಸಿ ಹಾಕುತ್ತದೆ. ನಮ್ಮ ಸಹೋದ್ಯೋಗಿಗಳು ಇದೀಗ ಇತರ ಪ್ರಯತ್ನ ಕೈಗೊಳ್ಳಲು ಮುಂದಾಗುತ್ತಿದ್ದಾರೆ ಎಂಬ ಅರಿವು ನಮ್ಮೆಲ್ಲರಲ್ಲೂ ಒಂದು ಹಂಚಿಕೆಯ ಭಾವನೆಯಾಗಿ ಹೊರಹೊಮ್ಮುತ್ತದೆ ಎಂದರು.
“ರಾಜಕೀಯದಲ್ಲಿ ಫುಲ್ಸ್ಟಾಲ್ ಎಂಬುದಿಲ್ಲ. ನಿಮಗೆಲ್ಲಾ ಉತ್ತಮ ಭವಿಷ್ಯ ಕಾಯುತ್ತಿದೆ. ನಿಮ್ಮ ಅನುಭವವೂ ನಮ್ಮ ದೇಶದ ಸೇವೆಯಲ್ಲಿ ಪ್ರಮುಖ ಭಾಗವಾಗಿ ಉಳಿಯುತ್ತದೆ ಎಂದ ಅವರು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಯಾದವ್ ಅವರ ಸೇವೆಯನ್ನು ವಿಶೇಷವಾಗಿ ಮೋದಿ ಅವರು ಪ್ರಶಂಸಿದರು.
ಇವರೆಲ್ಲ ತಮ್ಮ ಜೀವನದ ಅರ್ಧದಷ್ಟು ಸಮಯವನ್ನು ಸಂಸದೀಯ ಕಾರ್ಯದಲ್ಲಿ ತೊಡಗಿಸಿಕೊಂಡ ಧುರೀಣರು. ಇವರೆಲ್ಲ ಸದನಕ್ಕೆ ಸಮರ್ಪಣಾಭಾವದಿಂದ ಹಾಜರಾಗುತ್ತಿರುವ ರೀತಿ ನಿಜಕ್ಕೂ ಅನುಕರಣೀಯ. ಎಲ್ಲಾ ಹೊಸ ಸಂಸದರು ಕಲಿಯಬೇಕಾದ ಮನೋಭಾವ ಇದಾಗಿದೆ ಎಂದು ಬಣ್ಣಿಸಿದರು.
ಇದೇ ವೇಳೆ ಪ್ರಧಾನಿ, ನಿರ್ಗಮಿತ ಉಪಸಭಾಪತಿ ಹರಿವಂಶ್ ಅವರಿಗೂ ಗೌರವ ಸಲ್ಲಿಸಿದರು. ಅವರನ್ನು ಸೌಮ್ಯ ಮತ್ತು ಮೃದುಭಾಷಿ. ಕಠಿಣ ಕ್ರಮ ಕೈಗೊಳ್ಳುವ ವ್ಯಕ್ತಿ. ತಮ್ಮ ಬಿಡುವಿನ ವೇಳೆಯಲ್ಲಿ ದೇಶಾದ್ಯಂತ ಪ್ರಯಾಣ ಬೆಳೆಸುವುದನ್ನು ಮುಂದುವರೆಸಿದ ಅವರು, ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಕುರಿತು ಯುವಕರೊಂದಿಗೆ ಸದಾ ತೊಡಗಿಸಿಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.
ಕೇಂದ್ರ ಸಚಿವ ರಾಮ್ದಾಸ್ ಅಠಾವಳೆ ಅವರು ಕುರಿತು ಮಾತನಾಡಿದ ಪ್ರಧಾನಿ, ಸದಾ ಜೀವಂತವಾಗಿರುವ ಮನುಷ್ಯ. ಅವರ ನಿರ್ಗಮನದ ಬಳಿಕವೂ ಅವರು ದಣಿವರಿಯದಂತೆ ಕೆಲಸ ಮುಂದುವರೆಸುತ್ತಾರೆ ಎಂಬ ಭರವಸೆ ನನಗಿದೆ ಎಂದರು.
ಸಂಸತ್ತಿನ ದ್ವಿ ಸದನ ಪದ್ಧತಿ ಕುರಿತು ಮಾತನಾಡಿದ ಪ್ರಧಾನಿ, ಎರಡು ಸದನಗಳು ಎರಡನೇ ಒಪ್ಪಿಗೆ ಪಡೆಯುವ ಅಭ್ಯಾಸ ಮುಂದುವರೆಸಿದೆ. ಇದು ಪ್ರಜಾಪ್ರಭುತ್ವದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬಲಪಡಿಸುವ ಉತ್ತಮ ಕ್ರಮವಾಗಿದೆ. ಒಂದು ಸದನದಲ್ಲಿ ತೆಗೆದುಕೊಂಡ ನಿರ್ಧಾರ ಮತ್ತೊಂದು ಸದನದಲ್ಲಿ ಎರಡನೇ ಅಭಿಪ್ರಾಯಕ್ಕೆ ಹೋಗುತ್ತದೆ. ಇದು ಚರ್ಚೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹೊಸ ನಿರ್ದೇಶನ ನೀಡುತ್ತದೆ ಎಂದರು.
ಕೆಲವು ನಿರ್ಗಮಿತ ಸದಸ್ಯರು ಹಳೆಯ ಮತ್ತು ಹೊಸ ಸಂಸತ್ತಿನ ಕಟ್ಟಡಗಳಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದು ಅವರು ಇದೇ ವೇಳೆ ನೆನಪಿಸಿದರು.

