ಬೆಂಗಳೂರಿನಲ್ಲಿ ಕಮರ್ಷಿಯಲ್ ಎಲ್ಪಿಜಿ ಅಭಾವ: ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಚಂದ್ರವಳ್ಳಿ ನ್ಯೂಸ್,
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್ಪಿಜಿ (Commercial LPG) ಮತ್ತು ಆಟೋ ಎಲ್ಪಿಜಿ ಕೊರತೆಯನ್ನು ನೀಗಿಸಲು
ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದ ಪ್ರಮುಖ ಅಂಶಗಳು ಇಲ್ಲಿವೆ:
ತೀವ್ರ ಅಭಾವ: ಬೆಂಗಳೂರಿನಲ್ಲಿ ಹೋಟೆಲ್, ರೆಸ್ಟೋರೆಂಟ್ ಮತ್ತು ಪಿಜಿಗಳಿಂದ ದಿನಕ್ಕೆ 50,000 ಸಿಲಿಂಡರ್ಗಳ ಬೇಡಿಕೆ ಇದೆ. ಆದರೆ ಪ್ರಸ್ತುತ ದಿನಕ್ಕೆ ಕೇವಲ 1,000 ಸಿಲಿಂಡರ್ಗಳು ಮಾತ್ರ ಪೂರೈಕೆಯಾಗುತ್ತಿವೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ.
ಬಾಗಿಲು ಮುಚ್ಚುತ್ತಿರುವ ಹೋಟೆಲ್ಗಳು: ಗ್ಯಾಸ್ ಕೊರತೆಯಿಂದಾಗಿ ನಗರದ ಹಲವು ಹೋಟೆಲ್ಗಳು ಮತ್ತು ಕೆಟರಿಂಗ್ ಸಂಸ್ಥೆಗಳು ಸ್ಥಗಿತಗೊಳ್ಳುತ್ತಿವೆ. ಇದು ಐಟಿ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಆಟೋ ಚಾಲಕರಿಗೆ ಸಂಕಷ್ಟ: ಆಟೋ ಎಲ್ಪಿಜಿ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದು, ನಗರದ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಟೋ ರಿಕ್ಷಾ ಚಾಲಕರ ಜೀವನೋಪಾಯಕ್ಕೆ ತೊಂದರೆಯಾಗಿದೆ.
ಮಾನಿಟರಿಂಗ್ ವ್ಯವಸ್ಥೆಯ ಕೊರತೆ: ಗೃಹಬಳಕೆಯ ಗ್ಯಾಸ್ ಪೂರೈಕೆಗೆ ಐಟಿ ವ್ಯವಸ್ಥೆ ಇದೆ, ಆದರೆ ವಾಣಿಜ್ಯ ಮತ್ತು ಆಟೋ ಎಲ್ಪಿಜಿ ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ಪ್ಲಾಟ್ಫಾರ್ಮ್ ಇಲ್ಲದಿರುವುದು ಪಾರದರ್ಶಕತೆಯ ಕೊರತೆಗೆ ಕಾರಣವಾಗಿದೆ ಎಂದು ಸಿಎಂ ಬೆಟ್ಟು ಮಾಡಿದ್ದಾರೆ.
ಕೇಂದ್ರಕ್ಕೆ ಮನವಿ: ಸದ್ಯ ಭಾರತಕ್ಕೆ 2 ಹೊಸ ಅನಿಲ ಟ್ಯಾಂಕರ್ಗಳು ಆಗಮಿಸುತ್ತಿವೆ ಎಂಬ ಮಾಹಿತಿ ಇದ್ದು, ಅವುಗಳಲ್ಲಿ ಕರ್ನಾಟಕಕ್ಕೆ, ವಿಶೇಷವಾಗಿ ಬೆಂಗಳೂರಿಗೆ ಹೆಚ್ಚಿನ ಪಾಲನ್ನು ಹಂಚಿಕೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಕೇಂದ್ರ ಸಚಿವರನ್ನು ವಿನಂತಿಸಿದ್ದಾರೆ.

