ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಭದ್ರಾವತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಅಧಿಕೃತ ದಾಖಲೆಗಳನ್ನು ತುರ್ತಾಗಿ ಸಲ್ಲಿಸುವಂತೆ ಕರ್ನಾಟಕ ಲೋಕಾಯುಕ್ತವು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ:
ಭದ್ರಾವತಿ ಬಿಇಒ ಕಚೇರಿಯ ಅಧೀಕ್ಷಕರಾದ ಲಿಂಗರಾಜು ಎಂ. ಅವರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಎ.ಕೆ. ಮತ್ತು ಮಂಜುನಾಥ ಎಂಬುವವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನನ್ವಯ ಮಾರ್ಚ್ 2, 2026 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರ ಕಲಂ 7(a) ಮತ್ತು 7(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಾಯುಕ್ತ ಕೇಳಿರುವ ಪ್ರಮುಖ ಮಾಹಿತಿಗಳು:
ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್-3 ವೀರೇಶ್ಸಿ.ಎಲ್. ಕುಸಲಾಪುರ ಅವರು ಈ ಕೆಳಗಿನ ಮಾಹಿತಿಯನ್ನು ಕೋರಿದ್ದಾರೆ:
ಅರ್ಜಿಗಳ ವಿವರ: ದೂರುದಾರ ಲಿಂಗರಾಜು ಅವರು ತಮ್ಮ ವಾರ್ಷಿಕ ವೇತನ ಬಡ್ತಿ ಮತ್ತು ಹಿಂಬಾಕಿ ವೇತನ ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿಗಳ ಸ್ವೀಕೃತಿ ಪ್ರತಿಗಳು.
ಕಾರ್ಯವಿಧಾನ: ವೇತನ ಬಡ್ತಿ ಮತ್ತು ಭತ್ಯೆಗಳ ಮಂಜೂರಾತಿಗೆ ಇಲಾಖೆಯಲ್ಲಿ ಅನುಸರಿಸಬೇಕಾದ ಅಧಿಕೃತ ಕಾರ್ಯವಿಧಾನ (Work Process).
ಹೊಣೆಗಾರಿಕೆ: ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಬಿಇಒ ನಾಗೇಂದ್ರಪ್ಪ ಎ.ಕೆ. ಅವರ ಕರ್ತವ್ಯ ಮತ್ತು ಹೊಣೆಗಾರಿಕೆಗಳೇನು?
ವಿಳಂಬದ ವಿವರ: ಪ್ರಸ್ತುತ ಈ ಅರ್ಜಿಗಳು ಯಾವ ಕಚೇರಿಯಲ್ಲಿ, ಯಾರ ಬಳಿ ಬಾಕಿ ಇವೆ ಎಂಬ ಮಾಹಿತಿ.
ತನಿಖೆಗೆ ಆದೇಶ:
ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ), ಯಾವುದೇ ವಿಳಂಬಕ್ಕೆ ಆಸ್ಪದ ನೀಡದಂತೆ ದೃಢೀಕರಿಸಿದ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಮುದ್ದಾಂ (ಖುದ್ದಾಗಿ) ಸಲ್ಲಿಸುವಂತೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

