ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಕೆಳಗಿನ ಜೂಗಾನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಗೌರಿಬಿದನೂರು ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಮಾರನೇ ದಿನ ಸಂಪ್ರದಾಯ ಬದ್ಧವಾಗಿ ನಡೆಯುವ ಶ್ರೀ ವೀರ ತಿಪ್ಪಯ್ಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಅಲಂಕಾರಿಕ ನೀರು ಬಂಡಿಗಳ ಮೆರವಣಿಗೆಯ ಭಕ್ತಿ ಭಾವದೊಂದಿಗೆ ಸಾವಿರಾರು ಭಕ್ತರು ಜಾತ್ರೆಯಲ್ಲಿ ಧನ್ಯತೆ ಮೆರೆದರು.
ಜಾತ್ರೆಯ ಪ್ರಮುಖ ಆಕರ್ಷಣೆಯಾದ ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಲ್ಪಟ್ಟ ನೀರುಬಂಡಿಗಳ ಮೆರವಣಿಗೆ ಎಲ್ಲರ ಕಣ್ಮನ ಸೆಳೆದಿತ್ತು. ರೈತರು ತಮ್ಮ ರಾಸುಗಳಿಗೆ ಬಣ್ಣಗಳಿಂದ ಅಲಂಕರಿಸಿ, ನೀರುಬಂಡಿಗಳನ್ನು ಕಟ್ಟಿಕೊಂಡು ಭಕ್ತಿಭಾವದಿಂದ ಮೆರವಣಿಗೆ ನಡೆಸಿದ ದೃಶ್ಯ ಗಮನಾರ್ಹವಾಗಿತ್ತು.
ಬಣ್ಣಬಣ್ಣದ ಅಲಂಕಾರಗಳಿಂದ ಸಜ್ಜುಗೊಂಡ ಎತ್ತುಗಳು, ಕಳಸಗಳು ಮತ್ತು ಸಂಪ್ರದಾಯಬದ್ಧ ನೀರು ಬಂಡಿಗಳು ಜಾತ್ರೆಯ ಸೊಬಗನ್ನು ಹೆಚ್ಚಿಸಿತ್ತು.ಗ್ರಾಮೀಣ ಸಂಸ್ಕೃತಿ, ಪರಂಪರೆ ಮತ್ತು ರೈತರ ಜೀವನಶೈಲಿಯನ್ನು ಪ್ರತಿ ಬಿಂಬಿಸಿದ ಈ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು.

ಮಜ್ಜಿಗೆ ಮತ್ತು ಪಾನಕ ವಿತರಣೆ:
ಅಪಾರ ಭಕ್ತರ ಸಂಭ್ರಮ ಸಡಗರ ಜಾತ್ರೆಗೆ ವಿಶೇಷ ಮೆರುಗು ತಂದವು. ಇಂತಹ ಸಾಂಪ್ರದಾಯಿಕ ಉತ್ಸವಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಸಂಸ್ಕೃತಿ ಮೌಲ್ಯಗಳನ್ನು ಬಲಪಡಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಧ ಮಂಜುನಾಥ್, ಮುಖಂಡರಾದ ಕುಮಾರ್, ವೀರತಿಪ್ಪಯ್ಯ ದೇವರಾಜ್ ಸೇರಿದಂತೆ ಸುತ್ತಮುತ್ತಲಿನ ರೈತರು ಹಾಗು ಸಾವಿರಾರು ಜನ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಭಕ್ತಿ ಭಾವ ಮೆರೆದು ಹಬ್ಬದ ಉತ್ಸಾಹ ಹಂಚಿಕೊಂಡರು.

