ದಾವಣಗೆರೆ-ಬಾಗಲಕೋಟೆ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ ಹೈಕಮಾಂಡ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು/ನವದೆಹಲಿ:
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್​ ಕೊನೆಗೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.‌
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸಮರ್ಥ್​ ಶಾಮನೂರು ಹಾಗೂ ಬಾಗಲಕೋಟೆ ಅಭ್ಯರ್ಥಿಯಾಗಿ ಉಮೇಶ ಹುಲ್ಲಪ್ಪ ಮೇಟಿ ಹೆಸರನ್ನು ಪ್ರಕಟಿಸಿದೆ. ತೀವ್ರ ಪ್ರತಿರೋಧ
, ಸಾಕಷ್ಟು ಲಾಬಿ, ಒತ್ತಡ, ವಿರೋಧ, ಗೊಂದಲ, ಸರಣಿ ಸಭೆಗಳ ಬಳಿಕ ಎರಡೂ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೇ ಕಾಂಗ್ರೆಸ್ ಪಕ್ಷ ಮಣಿದು ಮಣೆ ಹಾಕಿದೆ.

ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮಾ.23ರಂದು ಸೋಮವಾರ ಕೊನೆಯ ದಿನವಾಗಿದೆ.

- Advertisement - 

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಹಾಗೂ ಹೆಚ್.ವೈ.ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿತ್ತು.

ಬಹುತೇಕ ಕುಟುಂಬ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್​ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವುದಕ್ಕೆ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕ್ಷೇತ್ರದಲ್ಲಿ ನಿರ್ಣಾಯಕ ಸಮುದಾಯವಾಗಿರುವ ಮುಸ್ಲಿಂರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿಯಲಾಗಿತ್ತು.

- Advertisement - 

ಈ ಬಗ್ಗೆ ಸಚಿವ ಜಮೀರ್ ಕೂಡ ತೀವ್ರ ಒತ್ತಡ ಹೇರಿದ್ದರು. ಅತ್ತ, ಕ್ಷೇತ್ರದಲ್ಲಿ ನಡೆದ ಸಭೆಯಲ್ಲೂ ಮುಸ್ಲಿಂ ಸಮುದಾಯಕ್ಕೇ ಟಿಕೆಟ್ ನೀಡಬೇಕು ಎಂದು ಚುನಾವಣಾ ಉಸ್ತುವಾರಿ ನಾಯಕರ ಮುಂದೆ ಬಲವಾದ ಬೇಡಿಕೆ ಇಟ್ಟಿದ್ದರು‌. ಒಂದು ವೇಳೆ ಸಮಾದಾಯಕ್ಕೆ ಟಿಕೆಟ್ ನೀಡದೇ ಇದ್ದರೆ, ಮತ ಹಾಕುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಇತ್ತ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಗ, ದಿವಂಗತ ಶಾಮನೂರು ಮೊಮ್ಮಗ ಸಮರ್ಥ್ ಟಿಕೆಟ್​ ಘೋಷಣೆಗೂ ಮುನ್ನ ಶುಕ್ರವಾರವೇ(ಮಾ.20) ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಳಿಕ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಕೂಡ ಉಮೇದುವಾರಿಕೆ ಸಲ್ಲಿಸಿ ಕುತೂಹಲ ಕೆರಳಿಸಿದ್ದರು.

ಶನಿವಾರ ಸಿಎಂ ಸಿದ್ದರಾಮಯ್ಯ ಮುಸ್ಲಿಂ ನಾಯಕ ಸಚಿವ ಜಮೀರ್ ಅಹಮದ್ ಜೊತೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೂಡ ಸಿಎಂರನ್ನು ಭೇಟಿಯಾಗಿ ಚರ್ಚಿಸಿದ್ದರು. ಇದೀಗ ಹೈಕಮಾಂಡ್ ಸಮರ್ಥ್​​ ಶಾಮನೂರುಗೆ ಟಿಕೆಟ್ ಘೋಷಿಸಿದೆ. ಮುಸ್ಲಿಂ ಸಮುದಾಯದ ನಡೆ ಏನಿರಲಿದೆ, ಹೈಕಮಾಂಡ್ ಯಾವ ರೀತಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ ಎಂಬುದು ಕುತೂಹಲ ಕೆರಳಿಸಿದೆ.

ಉಮೇಶ್ ಮೇಟಿಗೆ ಟಿಕೆಟ್:
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ದಿವಂಗತ ಹೆಚ್.ವೈ.ಮೇಟಿ ಕುಟುಂಬಕ್ಕೇ ಟಿಕೆಟ್ ನೀಡುವುದು ಖಚಿತವಾಗಿತ್ತು. ಆದರೆ
, ಕುಟುಂಬದಲ್ಲೇ ಟಿಕೆಟ್​​​ಗಾಗಿ ತೀವ್ರ ಪೈಪೋಟಿ ಏರ್ಪಟ್ಟು ಗೊಂದಲ ಉಂಟಾಗಿತ್ತು. ಸಿಎಂ ಸಿದ್ದರಾಮಯ್ಯ ಕುಟುಂಬ ಸದಸ್ಯರನ್ನು ವಿಧಾನಸೌಧಕ್ಕೆ ಕರೆದು ಸುದೀರ್ಘವಾಗಿ ಚರ್ಚೆ ನಡೆಸಿದ್ದರು.

ಹೆಚ್.ವೈ.ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ್​, ಪುತ್ರಿಯರಾದ ಮಹಾದೇವಿ ಮೇಟಿ ಹಾಗೂ ಬಾಯಕ್ಕ ಜೊತೆ ಸಿಎಂ ಚರ್ಚೆ ನಡೆಸಿದ್ದರು.
ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದರು.

ಹೆಚ್.ವೈ.ಮೇಟಿ ಕುಟುಂಬದ ಮೂವರು ಅಂದರೆ ಮಲ್ಲಿಕಾರ್ಜುನ, ಉಮೇಶ್ ಹಾಗೂ ಮಹಾದೇವಿ ಅವರು ಟಿಕೆಟ್ ಕೋರಿದ್ದರು.
ಮೇಟಿ ಪುತ್ರಿ ಮಹಾದೇವಿ ಟಿಕೆಟ್​​ಗೆ ಪಟ್ಟು ಹಿಡಿದಿದ್ದು
, ಒಮ್ಮತಕ್ಕೆ ಒಪ್ಪಿಲ್ಲ ಎನ್ನಲಾಗಿತ್ತು. ಆದರೆ, ಕೊನೆಗೆ ಹೈಕಮಾಂಡ್ ಉಮೇಶ್ ಮೇಟಿಗೆ ಅವಕಾಶ ನೀಡಿದೆ. ತಂದೆಯ ಜೊತೆಗೆ ಇದ್ದು ರಾಜಕೀಯ ಅರಿತಿರುವ ಉಮೇಶ ಮೇಟಿ, ಈ ಉಪ ಚುನಾವಣೆ ಎದುರಿಸುವ ಪರಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

ಉಪ ಚುನಾವಣೆಗೆ ಮಾರ್ಚ್-16ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮಾ.23 ರಂದು ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮಾ.24ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ.26ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

Share This Article
error: Content is protected !!
";