ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನೇಕಾರ ಸಮುದಾಯಗಳು ಸಂಘಟಿತರಾದಾಗ ಮಾತ್ರ ಎಲ್ಲ ಹಂತಗಳಲ್ಲಿ ಪ್ರಗತಿ ಹೊಂದಲು ಸಾಧ್ಯ. ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯಿಂದ ಮಾತ್ರ ಸಮುದಾಯ ಮುಂದುವರೆಯಲು ಸಾಧ್ಯ ಎಂದು ಟಿಎಂಸಿ ಬ್ಯಾಂಕ್ ಉಪಾಧ್ಯಕ್ಷ ಪಿ.ಸಿ.ವೆಂಕಟೇಶ್ ಹೇಳಿದರು.
ಇಲ್ಲಿನ ಶಾಂತಿನಗರ-ದರ್ಗಾಜೋಗಿಹಳ್ಳಿಯ ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘ ಆಯೋಜಿಸಿದ್ದ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
1 ಸಾವಿರ ವರ್ಷಗಳ ಹಿಂದೆಯೇ ನೇಕಾರ ಕಸುಬಿನ ಮನೆತನದಲ್ಲಿ ಹುಟ್ಟಿ ಬೆಳೆದ ದಾಸಿಮಯ್ಯನವರು ಸಾಮಾಜಿಕ ಅಸಮಾನತೆಯ ವಿರುದ್ದ ದನಿಯೆತ್ತಿ ಸಮಾನತೆಯ ಸಂದೇಶ ಸಾರಿದರು. ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದ ಅವರು, ದೇವಾಂಗ ಸಮುದಾಯದ ಅನನ್ಯತೆಯ ಪ್ರತೀಕವಾಗಿದ್ದಾರೆ. ಅವರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಈ ರೀತಿಯ ಆಚರಣೆಗಳಿಗೆ ಹೆಚ್ಚಿನ ಮಹತ್ವ ಬರುತ್ತದೆ ಎಂದು ತಿಳಿಸಿದರು.
ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಕನ್ನಡದ ಅನನ್ಯ ಕೊಡುಗೆ ಎನಿಸಿರುವ ವಚನ ಸಾಹಿತ್ಯದ ಆದ್ಯ ಪ್ರವರ್ತಕ ದಾಸಿಮಯ್ಯ ಎಂಬುದು ವಿಶೇಷ. ಜನಭಾಷೆಯಲ್ಲಿ ಅನುಭವದ ಆಲೋಚನೆಗಳು, ಲೌಕಿಕ ಮತ್ತು ಪಾರಮಾರ್ಥಿಕ ವಿಚಾರಗಳು, ಸಾಮಾಜಿಕ ಪಿಡುಗುಗಳ ವಿರುದ್ದದ ಬಂಡಾಯ ಹಾಗೂ ಜಾಗೃತಿಯನ್ನು ಕಟ್ಟಿಕೊಟ್ಟ ಮೊದಲಿಗರು. ಅವರ ವಚನಗಳಲ್ಲಿ ಅಡಗಿರುವ ಗೂಡಾರ್ಥ ವಿಶ್ಲೇಷಣಾರ್ಹ. ಬಸವಾದಿ ಶರಣರಿಗೆ ದಾಸಿಮಯ್ಯ ಹಲವು ವಿಧದಲ್ಲಿ ಮಾರ್ಗದರ್ಶಿಯಾಗಿದ್ದರು ಎಂಬುದನ್ನು ಸ್ವತಃ ಬಸವಣ್ಣನವರು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಪ್ರೊ.ಎಂ.ಜಿ.ಅಮರನಾಥ್ ಮಾತನಾಡಿ, ದೇವರ ದಾಸಿಮಯ್ಯನವರಂತಹ ಶ್ರೇಷ್ಠ ಚಿಂತಕರ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯಬೇಕು. ಆ ನಿಟ್ಟಿನಲ್ಲಿ ಸಮುದಾಯದ ಪ್ರಾಜ್ಞರು ಚಿಂತಿಸಬೇಕು. ಹೊಸ ವಿಚಾರಗಳನ್ನು ಸಮಾಜಕ್ಕೆ ಅನಾವರಣಗೊಳಿಸುವ ಮೂಲಕ ದಿಗ್ದರ್ಶನ ಮಾಡಿಸಬೇಕು ಎಂದರು.
ನಗರಸಭೆ ಸದಸ್ಯ ಎಚ್.ಎಸ್.ಶಿವಶಂಕರ್ ಮಾತನಾಡಿ, ಸಮಾಜದಲ್ಲಿ ಮೇಲು-ಕೀಳು ಭಾವನೆಗಳನ್ನು ಹೋಗಲಾಡಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ದಾಸಿಮಯ್ಯನವರ ಬದುಕು ಆದರ್ಶಪ್ರಾಯವಾಗಬೇಕು. ನೇಕಾರ ಸಮುದಾಯ ಸರ್ಕಾರ ಹಾಗೂ ಇತರ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳ ಬಗ್ಗೆ ಜಾಗೃತಿ ಹೊಂದಬೇಕು. ನೇಕಾರ ಭವನ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ನಗರಸಭೆ ಸಹಕಾರ ನೀಡುತ್ತದೆ ಎಂದರು.
ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರ ಸಂಘದ ಅಧ್ಯಕ್ಷ ಎ.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನೇಕಾರ ಬಿ.ಜಿ.ಪುಟ್ಟರಾಜು ಅವರಿಗೆ ವಾರ್ಷಿಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ದರ್ಗಾಜೋಗಿಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷೆ ಸುಧಾರಾಣಿ, ಸದಸ್ಯರಾದ ಲಕ್ಷ್ಮೀಪತಿ, ವತ್ಸಲ, ನವೀನ್, ಎಚ್.ವಿ.ಅಖಿಲೇಶ್, ಮಹಿಳಾ ಸಮಾಜ ಅಧ್ಯಕ್ಷೆ ಎಂ.ಕೆ.ವತ್ಸಲ, ದೇವಾಂಗ ಮಂಡಲಿ ಉಪಾಧ್ಯಕ್ಷ ಬಿ.ಜಿ.ಅಮರನಾಥ್, ಸಂಘದ ಉಪಾಧ್ಯಕ್ಷ ರಾಮಣ್ಣ, ಎಂ.ಡಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಎನ್.ರಾಮಚಂದ್ರ, ಕಾರ್ಯಾಧ್ಯಕ್ಷ ಇ.ಬಾಬು, ಖಜಾಂಚಿ ಮುನಿನಾರಾಯಣಸ್ವಾಮಿ, ಸಹಕಾರ್ಯದರ್ಶಿ ವಿಜಯಕುಮಾರ್, ಶೋಭಾ, ನಿರ್ದೇಶಕರಾದ ಲಕ್ಷ್ಮೀಕಾಂತ, ಮಧುಚಂದ್ರ, ಜಯರಾಮ್, ನಾರಾಯಣಸ್ವಾಮಿ, ಶೋಭಾ, ಕುಮಾರ್, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.

