ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಒಳಮೀಸಲಾತಿ ವಿಷಯದಲ್ಲಿ ನಾಗಮೋಹನ್ ದಾಸ್ ಆಯೋಗ ನೀಡಿರುವ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ಮುಖಂಡರಾದ ಜಿ ಲಕ್ಷ್ಮೀಪತಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ನೆಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ದಾಸ್ ರವರ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಸಮೀಕ್ಷೆ ನಡೆಸಿ ವರದಿಯನ್ನು ಪಡೆದು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಸಂಪೂರ್ಣ ಅವೈಜ್ಞಾನಿಕ ವಾಗಿದ್ದು ಆದ್ದರಿಂದ ಅದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಮುದಾಯದ ಬಂದುಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಲಕ್ಷ್ಮೀಪತಿ ಹೇಳಿದರು.
ಛಲವಾದಿ ಮಹಾಸಭಾ ಜಿಲ್ಲಾ ನಿಕಟಪೂರ್ವ ಜಿಲ್ಲಾಧ್ಯಕ್ಷ ಲೋಕೇಶ್ ಮಾತನಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನೀಡಿರುವ ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ವರದಿಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿಅಂಶಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್ದಾಸ್ ರವರ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡಿ ವ್ಯತ್ಯಾಸಗಳು ಕಂಡುಬಂದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳಬೇಕು. ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರವು ಯಾವುದೇ ಮಾನದಂಡವನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು ಎಂದು ಅಗ್ರಹಿಸಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸದೇ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಗತ್ಯ ಅಂಕಿಅಂಶಗಳನ್ನು ಕ್ರೂಢೀಕರಿಸದೇ ಒಂದು ಜಾತಿಯನ್ನು ಒಲೈಸಲು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆಯನ್ನು 14 ಭಾಗಗಳಾಗಿ ವಿಂಗಡಿಸಿ 1.38ಲಕ್ಷ ಬಲಗೈ ಸಮುದಾಯದ ಜನಸಂಖ್ಯೆಯನ್ನು ಆಲೆಮಾರಿ ಗುಂಪಿಗೆ, 2,58,915 ಜನಸಂಖ್ಯೆಯನ್ನು ಮಾದಿಗರ ಗುಂಪಿಗೆ ಸರ್ಕಾರದ ನಿಬಂಧನೆಗಳಿಗೆ ವಿರುದ್ಧವಾಗಿ 4,74,954 ಜನರನ್ನು ಆದಿಕರ್ನಾಟಕ, ಆದಿ-ದ್ರಾವಿಡ ಹಾಗೂ ಆದಿ-ಆಂಧ್ರಗಳೆಂದು ವಿಂಗಡಿಸಿ ಶೇಕಡ 1ರಷ್ಟು ಮೀಸಲಾತಿ ನಿಗದಿಪಡಿಸಲು ಶಿಫಾರಸ್ಸು ಮಾಡಿರುವುದಲ್ಲದೇ ಜನರಲ್ ಮೆರಿಟ್ ನಲ್ಲಿ ನೇಮಕವಾಗಿರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ನೌಕರರನ್ನು ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿರುವುದಲ್ಲದೇ ಸಾಮಾನ್ಯ ಸ್ಥಾನಗಳಲ್ಲಿ ಗೆದ್ದಿರುವ ಜನಪ್ರತಿನಿಧಿಗಳನ್ನು ಬಲಗೈ ಜನ ಪ್ರತಿನಿಧಿಗಳ ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿ ದುರುದ್ದೇಶ ಪೂರಿತವಾದ ಪಕ್ಷಪಾತದಿಂದ ಕೂಡಿದ ವರದಿಯನ್ನು ಸಿದ್ಧಪಡಿಸಿ ಚೆನ್ನಾಗಿ ಉಂಡವರು, ತ್ಯಾಗ ಮಾಡಬೇಕು ಎಂದು ಉದ್ದೇಶ ಪೂರ್ವಕವಾಗಿಯೇ ಬಲಗೈ ಸಮುದಾಯಕ್ಕೆ ಯಾವುದೇ ಮೀಸಲಾತಿ ಸೌಲಭ್ಯ ದೊರೆಯದಂತೆ ವರದಿ ನೀಡಿರುತ್ತಾರೆ. ಸದರಿ ವರದಿಯನ್ವಯ ರಾಜ್ಯ ಸರ್ಕಾವು ಪರಿಶಿಷ್ಟ ಜಾತಿಯ ಬಲಗೈ ಸಮುದಾಯವನ್ನು ಗ್ರೂಪ್ – ‘ಬಿ‘ಗೆ ಸೇರಿಸುವುದರ ಮೂಲಕ ಯಾವುದೇ ಉನ್ನತ ಹುದ್ದೆಗಳು ಹೊಲಯ/ಛಲವಾದಿ ಬಲಗೈ ಸಮುದಾಯಕ್ಕೆ ಸಿಗದಂತೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿರುವುದು ಖಂಡನೀಯ ಎಂದರು.
ನಿವೃತ್ತ ಪ್ರಾಧ್ಯಾಪಕ ಚಂದ್ರಪ್ಪ ಮಾತನಾಡಿ 15+3ರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅಳವಡಿಸಬಾರದೆಂದು ತಪ್ಪಿದ್ದಲ್ಲಿ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು ಸರ್ಕಾರಕ್ಕೆ ಈ ಮೂಲಕ ಸ್ಪಷ್ಟವಾಗಿ ಎಚ್ಚರಿಸುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಛಲವಾದಿ ಮಹಾಸಭಾ ನಿಕಟಪೂರ್ವ ಅಧ್ಯಕ್ಷ ಗುರುರಾಜಪ್ಪ ಮಾತನಾಡಿ ಈ ಪ್ರತಿಭಟನೆ ನಮ್ಮ ಹಕ್ಕು ಪಡೆಯಲು ನಡೆಯುತ್ತಿದ್ದು, ಈ ಪ್ರತಿಭಟನೆ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯಲಿದ್ದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ನಿವೃತ್ತ ಐಎ ಎಸ್ ಅಧಿಕಾರಿ ಸಿದ್ದಯ್ಯ, ಸಂಪತ್ ರಾಜ್, ಪರುಷೋತ್ತಮ್, ನಾಗೇಶ್ ರಾವ್ ಸೇರಿದಂತೆ ಹಲವು ಸಮುದಾಯದ ಪ್ರಮುಖರು ಭಾಗವಹಿಸಲಿದ್ದು ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಹಕ್ಕು ಪಡೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ದೇವನಹಳ್ಳಿ ಶ್ರೀನಿವಾಸ್, ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಗಂಗಾಧರ್, ರಾಜಣ್ಣ, ಹನುಮಂತಪ್ಪ, ಮುನಿಯಪ್ಪ, ನಗರಸಭಾ ಸದಸ್ಯರಾದ ಮಂಜುನಾಥ್, ಕಾಂತರಾಜ್ ರಾಮಣ್ಣ, ಗಂಗಾಧರ್,ಕಮಲಮ್ಮ, ಪ ನ್ನೂರ್ ಸೇರಿದಂತೆ ಬಲಗೈ ಸಮುದಾಯದ ಅನೇಕ ಮುಖಂಡರು ಹಾಜರಿದ್ದರು.

