ಚಂದ್ರವಳ್ಳಿ ನ್ಯೂಸ್, ಗುವಾಹಟಿ:
“ಅಸ್ಸಾಂ ರಾಜ್ಯವು ಅಪಾರ ಹೆಮ್ಮೆ, ಶ್ರೀಮಂತ ಪರಂಪರೆ ಮತ್ತು ಕೆಚ್ಚೆದೆಯ ಜನರನ್ನು ಹೊಂದಿರುವ ನಾಡು. ಇಂದು ಅಸ್ಸಾಂನ ಜನತೆ ನ್ಯಾಯಯುತ, ಅಂತರ್ಗತ ಮತ್ತು ಗೌರವಯುತ ಭವಿಷ್ಯಕ್ಕಾಗಿ ಕಾಯುತ್ತಿದ್ದಾರೆ,” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬಹಿರಂಗ ಸಮಾವೇಶಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿವಿಧೆಡೆ ಪ್ರಚಾರ: ಡಿ.ಕೆ. ಶಿವಕುಮಾರ್ ಅವರು ಅಸ್ಸಾಂನ ದಿಮೋರಿಯಾ, ಬೊಂಗಾಂ ಮತ್ತು ಬೆಲ್ಟೋಲಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.
ಬೃಹತ್ ರ‍್ಯಾಲಿ: ಗುವಾಹಟಿಯಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾದ ಗೌರವ್ ಗೊಗೊಯ್ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ವೀಕ್ಷಕರಾದ ಭೂಪೇಶ್ ಬಘೇಲ್ ಅವರೊಂದಿಗೆ ಪಾಲ್ಗೊಂಡು ಶಕ್ತಿ ಪ್ರದರ್ಶನ ಮಾಡಿದರು.
ಜನ ಬೆಂಬಲ: ಅಸ್ಸಾಂ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ತೋರುತ್ತಿರುವ ಅಚಲ ವಿಶ್ವಾಸ ಮತ್ತು ಬೆಂಬಲಕ್ಕೆ ಡಿ.ಕೆ. ಶಿವಕುಮಾರ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.
ಈ ಪ್ರಚಾರ ಸಭೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದು, ಅಸ್ಸಾಂನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

