ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿರುವ ಅಕಾಲಿಕ ಮಳೆಯಿಂದ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು, ಸರ್ಕಾರದ ವಿಳಂಬ ಧೋರಣೆಯನ್ನು ಖಂಡಿಸಿ ಈ ಕೆಳಗಿನ ತುರ್ತು ಕ್ರಮಗಳಿಗೆ ಆಗ್ರಹಿಸಿದ್ದಾರೆ:
ತ್ವರಿತ ಜಂಟಿ ಸಮೀಕ್ಷೆ: ಮಳೆ ಪೀಡಿತ ಪ್ರದೇಶಗಳಲ್ಲಿ ಅಡಿಕೆ, ರಬ್ಬರ್ ಹಾಗೂ ತೆಂಗಿನ ಮರಗಳು ನೆಲಸಮವಾಗಿವೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಬೆಳೆ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟದ ಬಗ್ಗೆ ನಿಖರ ಸಮೀಕ್ಷೆ ನಡೆಸಬೇಕು.
ವೈಜ್ಞಾನಿಕ ಪರಿಹಾರ ಘೋಷಣೆ: ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡು ಕಂಗೆಟ್ಟಿರುವ ರೈತರಿಗೆ ಕೇವಲ ಅಲ್ಪ ಮೊತ್ತದ ಪರಿಹಾರ ನೀಡದೆ, ವೈಜ್ಞಾನಿಕವಾಗಿ ಹೆಚ್ಚಿನ ಪರಿಹಾರವನ್ನು ಸರ್ಕಾರ ತಕ್ಷಣವೇ ಘೋಷಿಸಬೇಕು.
ವಸತಿ ರಹಿತರಿಗೆ ನೆರವು: ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಗಳು ಬೀದಿಗೆ ಬಂದಿವೆ. ಅಂತಹ ಕುಟುಂಬಗಳಿಗೆ ತಕ್ಷಣದ ತಾತ್ಕಾಲಿಕ ನೆರವು ಹಾಗೂ ಮನೆಗಳ ಪುನರ್ನಿರ್ಮಾಣಕ್ಕೆ ಅಗತ್ಯ ಧನಸಹಾಯ ನೀಡಬೇಕು.
ವಿದ್ಯುತ್ ವ್ಯವಸ್ಥೆ ಸರಿಪಡಿಸಿ: ಮರಗಳು ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಇದರಿಂದ ಹಲವು ಹಳ್ಳಿಗಳು ಕತ್ತಲಲ್ಲಿವೆ. ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
”ರೈತರು ಮತ್ತು ಜನಸಾಮಾನ್ಯರು ಸಂಕಷ್ಟದಲ್ಲಿರುವಾಗ ಸರ್ಕಾರ ಕಾಲಹರಣ ಮಾಡಬಾರದು. ವಿಳಂಬ ಧೋರಣೆ ಬಿಟ್ಟು ಸಂತ್ರಸ್ತರ ಬೆನ್ನಿಗೆ ನಿಲ್ಲುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು,” ಎಂದು ಆರ್. ಅಶೋಕ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

